ಚೆನ್ನೈ (ತಮಿಳುನಾಡು): ಬುಧವಾರ ಬೆಳಗ್ಗೆಯಿಂದಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮಿಳುನಾಡಿನ 20ಕ್ಕೂ ಹೆಚ್ಚು ಸ್ಥಳಗಳಿಗೆ ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಚೆನ್ನೈನ ಉಕ್ಕು ತಯಾರಿಕಾ ಕಂಪನಿ ಹಾಗೂ ಕಂಪನಿ ಮಾಲೀಕರ ಮನೆ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಮೊದಲ ಹಂತದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಚೆನ್ನೈನ ಥೌಸಂಡ್ ಲೈಟ್ ಪ್ರದೇಶದಲ್ಲಿರುವ ಸ್ಟೀಲ್ ತಯಾರಿಕಾ ಕಂಪನಿಯೊಂದರ ಕಚೇರಿ ಹಾಗೂ ಚೆನ್ನೈನ ಸೌಕಾರ್‌ಪೇಟ್‌ನ ಸ್ಟಾರ್ಟನ್ ಮುತ್ತಯ್ಯ ಮುದಲಿ ಸ್ಟ್ರೀಟ್‌ನಲ್ಲಿರುವ ಉದ್ಯಮಿಯೊಬ್ಬರ ಮನೆಯಲ್ಲೂ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಅದೇ ರೀತಿ ಮಾಧವರಂ ನಟರಾಜ್ ನಗರ, ತಾಂಬರಂ, ಕುಂದ್ರತ್ತೂರ್, ಎಗ್ಮೋರ್, ಮನ್ನಾಡಿ, ಉತ್ತರ ಚೆನ್ನೈ ಮತ್ತಿತರೆಡೆ ಖಾಸಗಿ ಗೋದಾಮಿನಲ್ಲಿ ತೆರಿಗೆ ವಂಚನೆ ಆರೋಪದಡಿ ಈ ದಾಳಿ ನಡೆದಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
ಇವುಗಳ ಹಿಂದೆ ಯಾವುದಾದರೂ ರಾಜಕೀಯ ವ್ಯಕ್ತಿಗಳ ಸಂಬಂಧವಿದೆಯಾ ಎಂಬುದರ ಬಗ್ಗೆ ಮುಂದಿನ ಹಂತದಲ್ಲಿ ಮಾಹಿತಿ ಹೊರಬೀಳಲಿದೆ. ಯಾವ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ, ಎಷ್ಟು ಕಡೆ ನಡೆಸಲಾಗಿದೆ ಎಂಬ ಮಾಹಿತಿಯನ್ನು ನಂತರ ಬಿಡುಗಡೆ ಮಾಡಲಾಗುವುದು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.