ಚೆನ್ನೈ (ತಮಿಳುನಾಡು) :ರಾಜ್ಯದ ಇಂಧನ ಸಚಿವ ವಿ. ಸೆಂಥಿಲ್ ಬಾಲಾಜಿ ಅವರಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ (IT) ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ, ಚೆನ್ನೈ, ಕೊಯಮತ್ತೂರು ಮತ್ತು ಕರೂರ್ ನಗರಗಳಲ್ಲಿ ಸಂಘಟಿತ ಶೋಧಗಳನ್ನು ಪ್ರಾರಂಭಿಸಿದ್ದಾರೆ. ಸಚಿವರೊಂದಿಗೆ ಸಂಪರ್ಕ ಹೊಂದಿರುವ ವಿವಿಧ ಸರ್ಕಾರಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸುಮಾರು 40 ನಿವಾಸಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ತೆಲುಗಿನ ಮೈತ್ರಿ ಮೂವಿ ಮೇಕರ್ಸ್ ಕಚೇರಿಯಲ್ಲಿ ಐಟಿ ಅಧಿಕಾರಿಗಳ ಶೋಧ ಕಾರ್ಯ
ಕಾರ್ಯಕರ್ತರ ನಡುವೆ ಘರ್ಷಣೆ:ಈ ಮಧ್ಯೆ, ಕರೂರ್ ಜಿಲ್ಲೆಯಲ್ಲಿ ಬಾಲಾಜಿ ಸಹೋದರ ಅಶೋಕ್ ಅವರ ಮನೆಯಲ್ಲಿ ಶೋಧ ನಡೆಸುತ್ತಿರುವ ಐಟಿ ಅಧಿಕಾರಿಗಳು ಮತ್ತು ಡಿಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ. ಬಾಲಾಜಿ ಹಿರಿಯ ಡಿಎಂಕೆ ನಾಯಕ. ಕರೂರ್ ಕಾರ್ಪೋರೇಷನ್ ಮೇಯರ್ ಡಿಎಂಕೆಯ ಕವಿತಾ ಗಣೇಶನ್ ಸೇರಿದಂತೆ 200ಕ್ಕೂ ಹೆಚ್ಚು ಡಿಎಂಕೆ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಐಟಿ ಅಧಿಕಾರಿಗಳನ್ನು ಪ್ರಶ್ನಿಸಲು ಪ್ರಾರಂಭಿಸಿದರು.
ಅಧಿಕಾರಿಗಳು ತಮ್ಮ ಗುರುತಿನ ಚೀಟಿ ತೋರಿಸಬೇಕು ಎಂದು ಒತ್ತಾಯಿಸಿದರು. ಅಧಿಕಾರಿಗಳು ಕಾರ್ಡ್‌ಗಳನ್ನು ತೋರಿಸಲು ನಿರಾಕರಿಸಿದ್ದರಿಂದ ಸ್ಥಳದಲ್ಲಿ ಗಲಾಟೆ ನಡೆಯಿತು. ಅಶೋಕ್ ಅವರ ಆಸ್ತಿಯ ಮೇಲೆ ಐಟಿ ದಾಳಿಯ ವೇಳೆ, ಸ್ಥಳವನ್ನು ಸುತ್ತುವರೆದ ಡಿಎಂಕೆ ಕಾರ್ಯಕರ್ತರು ಐಟಿ ಅಧಿಕಾರಿಗಳ ಕಾರಿನ ವಿಂಡ್‌ಶೀಲ್ಡ್ ಮತ್ತು ಹಿಂಬದಿಯ ಗ್ಲಾಸ್ನ್ನು ಒಡೆದಿದ್ದಾರೆ. ಇದರಿಂದಾಗಿ ಕೋಲಾಹಲ ಉಂಟಾಯಿತು.