ಹೈದರಾಬಾದ್: ತೆಲಂಗಾಣ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಮತ್ತು ಅವರ ಸಂಬಂಧಿಕರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಮಂಗಳವಾರ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದೆ. ಐಟಿ ತಂಡಗಳು ಹೈದರಾಬಾದ್, ಮೇಡಚಾಲ್ ಮತ್ತು ಮಲ್ಕಾಜ್‌ಗಿರಿ ಜಿಲ್ಲೆಗಳಲ್ಲಿರುವ ಸಚಿವರು, ಅವರ ಪುತ್ರ ಮಹೇಂದರ್ ರೆಡ್ಡಿ, ಅಳಿಯ ಮರ್ರಿ ರಾಜಶೇಖರ್ ರೆಡ್ಡಿ ಮತ್ತು ಇತರರ ಮನೆಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿವೆ.
ಐಟಿ ಇಲಾಖೆಯ ತೆರಿಗೆ ವಂಚನೆ ವಿಭಾಗದ ಸುಮಾರು 50 ತಂಡಗಳು ಮಂಗಳವಾರ ಬೆಳಗ್ಗೆ ಶೋಧ ಆರಂಭಿಸಿದ್ದು, ಕೊಂಪಲ್ಲಿಯಲ್ಲಿರುವ ಪಾಮ್ ಮಿಡೋಸ್ ವಿಲ್ಲಾಗಳಲ್ಲಿಯೂ ಶೋಧ ನಡೆಸಲಾಗಿದೆ. ಸುಮಾರು 150 ರಿಂದ 170 ಅಧಿಕಾರಿಗಳು ಏಕಕಾಲದಲ್ಲಿ ದಾಳಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಮಲ್ಲಾ ರೆಡ್ಡಿ ಗ್ರೂಪ್ ನಡೆಸುತ್ತಿರುವ ಸಂಸ್ಥೆಗಳ ಆದಾಯ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.