ಕೊಚ್ಚಿ (ಕೇರಳ):ಕೇರಳದಲ್ಲಿ ಯೂಟ್ಯೂಬರ್‌ಗಳಿಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ. 13 ಜನಪ್ರಿಯ ಮಲಯಾಳಿ ಯೂಟ್ಯೂಬರ್‌ಗಳ ನಿವಾಸ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಸುಮಾರು 25 ಕೋಟಿ ರೂಪಾಯಿ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಲಾಗಿದೆ.
ಕೇರಳದಾದ್ಯಂತ ಗುರುವಾರ ಲಕ್ಷಾಂತರ ಚಂದಾದಾರರನ್ನು ಹೊಂದಿರುವ ಜನಪ್ರಿಯ ಯೂಟ್ಯೂಬರ್‌ಗಳ ಮನೆ ಮತ್ತು ನಿವಾಸಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳು ತಂಡವು ಭಾರಿ ಅಕ್ರಮಗಳನ್ನು ಪತ್ತೆ ಮಾಡಿದೆ. ಇವರಲ್ಲಿ ಬಹುತೇಕರು ಎರಡು ಕೋಟಿ ರೂಪಾಯಿಗೂ ಹೆಚ್ಚು ಆದಾಯ ತೆರಿಗೆ ಕಟ್ಟಬೇಕಿದೆ. ಈ 13 ಯೂಟ್ಯೂಬರ್‌ಗಳ ಪಟ್ಟಿಯಲ್ಲಿ ನಟಿ ಮತ್ತು ನಿರೂಪಕಿ ಪರ್ಲಿ ಮಣಿ, ಸೆಬಿನ್ ಮತ್ತು ಸಾಜು ಮುಹಮ್ಮದ್ ಕೂಡ ಸೇರಿದ್ದಾರೆ.
ವಾರ್ಷಿಕ 1 ಕೋಟಿಯಿಂದ 2 ಕೋಟಿ ಆದಾಯವಿರುವ ಯೂಟ್ಯೂಬರ್‌ಗಳ ಮನೆಗಳಲ್ಲೂ ತನಿಖಾ ತಂಡ ತಪಾಸಣೆ ನಡೆಸಿದೆ. ಈ ವೇಳೆ ತೆರಿಗೆ ಕಟ್ಟದವರೇ ಹೆಚ್ಚು ಎಂಬುದು ಬಹಿರಂಗವಾಗಿದೆ. ಯೂಟ್ಯೂಬರ್‌ಗಳು ತಮ್ಮ ಆದಾಯಕ್ಕೆ ಅನುಗುಣವಾಗಿ ಆದಾಯ ತೆರಿಗೆ ಪಾವತಿಸುತ್ತಿಲ್ಲ ಎಂಬ ಮಾಹಿತಿಯನ್ನು ಆಧರಿಸಿ ಆದಾಯ ತೆರಿಗೆ ಆಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಡಿಎಂಕೆ ಸಚಿವ ಸೆಂಥಿಲ್ ಬಾಲಾಜಿಗೆ ಸೇರಿದ 40 ಸ್ಥಳಗಳಲ್ಲಿ ಐಟಿ ದಾಳಿ
ಕೇರಳದ ಹಲವು ಪ್ರಮುಖ ಯೂಟ್ಯೂಬರ್‌ಗಳು ಕೋಟಿಗಟ್ಟಲೆ ಆದಾಯ ಹೊಂದಿದ್ದಾರೆ. ಈ ದಾಳಿ ಸಂದರ್ಭದಲ್ಲಿ ಯೂಟ್ಯೂಬರ್‌ನ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮುಖ್ಯವಾಗಿ ಪರಿಶೀಲಿಸಲಾಗಿದೆ. ಮುಂದಿನ ಭಾಗವಾಗಿ ಯೂಟ್ಯೂಬರ್‌ಗಳಿಗೆ ನೋಟಿಸ್ ನೀಡಿ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ. ಇದೇ ವೇಳೆ, ಕಾನೂನಿನ ಪ್ರಕಾರ ಪಾವತಿಸಬೇಕಾದ ಆದಾಯ ತೆರಿಗೆ ದಂಡವನ್ನು ಪಾವತಿಸುವ ಮೂಲಕ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ತಪ್ಪಿಸಬಹುದಾಗಿದೆ ಎಂದೂ ತಿಳಿದು ಬಂದಿದೆ.
ಈ ಹಿಂದೆಯೂ ಇದೇ ರೀತಿ ಕೇರಳದ ಖ್ಯಾತ ಸಿನಿಮಾ ತಾರೆಯರ ಮನೆಗಳಲ್ಲಿ ಆದಾಯ ತೆರಿಗೆ ಇಲಾಖೆ ತಪಾಸಣೆ ನಡೆಸಿತ್ತು. ನಂತರ ಅಧಿಕಾರಿಗಳು ಖ್ಯಾತ ನಟ ಮೋಹನ್ ಲಾಲ್ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದರು. ಮಲಯಾಳಂ ಚಿತ್ರ ನಿರ್ಮಾಪಕರಾದ ಅಂಥೋನಿ ಪೆರುಂಬವೂರ್, ಆಂಟೊ ಜೋಸೆಫ್, ಲಿಸ್ಟಿನ್ ಸ್ಟೀಫನ್ ಮತ್ತು ನಟ, ನಿರ್ಮಾಪಕ ಪೃಥ್ವಿರಾಜ್ ಅವರ ಮನೆ ಮತ್ತು ಕಚೇರಿಗಳ ಆದಾಯ ತೆರಿಗೆ ಅಧಿಕಾರಿಗಳು ಮೇಲೂ ದಾಳಿ ನಡೆಸಿದ್ದಾರೆ. 2011ರಲ್ಲಿಯೂ ಆದಾಯ ತೆರಿಗೆ ಇಲಾಖೆಯು ಹಿರಿಯ ನಟರಾದ ಮೋಹನ್‌ಲಾಲ್ ಮತ್ತು ಮಮ್ಮುಟ್ಟಿ ಅವರ ಹಣಕಾಸು ವಹಿವಾಟಿನ ಬಗ್ಗೆ ತನಿಖೆ ನಡೆಸಿತ್ತು.
ಇದನ್ನೂ ಓದಿ:ತೆಲುಗಿನ ಮೈತ್ರಿ ಮೂವಿ ಮೇಕರ್ಸ್ ಕಚೇರಿಯಲ್ಲಿ ಐಟಿ ಅಧಿಕಾರಿಗಳ ಶೋಧ ಕಾರ್ಯ