ನವದೆಹಲಿ: ಟ್ವಿಟರ್‌ಗೆ ಸರಿಯಾದ ತಿರುಗೇಟು ನೀಡಲು ಐಟಿ ಸಚಿವಾಲಯವು "ಕೂ" ಎಂಬ ಸ್ವದೇಶಿ ಟ್ವಿಟರ್ ತರಹದ ಪ್ಲಾಟ್ಫಾರ್ಮ್ಗೆ ಬರುವಂತೆ ಜನತೆಗೆ ಕರೆ ನೀಡಿದೆ. ಇದಾದ ಬಳಿಕ ಬುಧವಾರ ಟ್ವಿಟರ್ ಮತ್ತು ಭಾರತ ಸರ್ಕಾರದ ನಡುವಿನ ಯುದ್ಧ ತೀವ್ರಗೊಂಡಿದೆ.
ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ವೇಳೆ ನಿಯಮ ಮೀರಿ ಪ್ರಚೋದನಕಾರಿ ಟ್ವೀಟ್ ಮಾಡಿದ್ದ, ಸುಮಾರು 500 ಟ್ವೀಟ್ ಖಾತೆಗಳನ್ನು ನಿಷೇಧ ಮಾಡುವಂತೆ ಕೇಂದ್ರ ಸರ್ಕಾರ ಈ ದೇಶದ ಕಾನೂನಿನ ಪ್ರಕಾರ ನಿರ್ದೇಶನ ಮಾಡಿತ್ತು. ಆದರೆ ಇದರ ಬಗ್ಗೆ ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿತ್ತು. ಇದಕ್ಕೆ ಭಾರತ ಸರ್ಕಾರ ತನ್ನ ಸ್ವದೇಶಿ ಸೋಶಿಯಲ್ ಮೀಡಿಯಾ ಆಪ್ 'ಕೂ' ಮೂಲಕ ಟಕ್ಕರ್ ನೀಡಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಸಚಿವರು 'ಕೂ' ಆಪ್‌ನಲ್ಲಿ ಖಾತೆ ತೆರೆಯುವ ಮೂಲಕ ಅದರತ್ತ ಜನರನ್ನು ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಟ್ವಿಟರ್ ಕೆಲವು ನಿಯಮಗಳ ಪ್ರಕಾರ ಶಾಶ್ವತ ಅಮಾನತು ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಐಟಿ ಸಚಿವಾಲಯವು ಕೈಗೊಳ್ಳಲು ನಿರ್ದೇಶಿಸಿರುವ ಕ್ರಮಗಳು ಭಾರತೀಯ ಕಾನೂನಿಗೆ ಅನುಗುಣವಾಗಿರುತ್ತವೆ ಎಂದು ನಾವು ನಂಬುವುದಿಲ್ಲ ಎಂದು ಕಂಪನಿ ಹೇಳಿದೆ.