ನವದೆಹಲಿ:ತೈಲ ಬೆಲೆಯ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಹೊರಡಿಸಿದ್ದು, ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಯಾವಾಗಲೂ ನಮಗೆ ಜನರೇ ಮೊದಲು ಎಂದು ಹೇಳಿದ್ದಾರೆ. ಪೆಟ್ರೋಲ್ ಮೇಲೆ ಪ್ರತಿ ಲೀಟರ್ಗೆ 8 ರೂ. ಹಾಗೂ ಡಿಸೇಲ್ ಪ್ರತಿ ಲೀಟರ್ಗೆ 6 ರೂಪಾಯಿ ಕಡಿಮೆ ಮಾಡುತ್ತಿರುವುದಾಗಿ ಘೋಷಣೆ ಮಾಡಿ, ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿರುವ ಮರುಕ್ಷಣವೇ ಪ್ರಧಾನಿ ಮೋದಿ ಟ್ವೀಟ್ ಮಾಡಿ, ಈ ರೀತಿಯಾಗಿ ಹೇಳಿಕೊಂಡಿದ್ದಾರೆ.
ಮೋದಿ ಮಾಡಿರುವ ಟ್ವೀಟ್: 'ಯಾವಾಗಲೂ ನಮಗೆ ‘ಜನರು ಮೊದಲು’. ಹಣಕಾಸು ಸಚಿವರ ಇಂದಿನ ನಿರ್ಧಾರಗಳು, ವಿಶೇಷವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಗಮನಾರ್ಹ ಇಳಿಕೆಗೆ ಸಂಬಂಧಿಸಿದ ನಿರ್ಧಾರ ಮಹತ್ವದಾಗಿದ್ದು, ಇದು ವಿವಿಧ ವಲಯಗಳ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತವೆ, ನಮ್ಮ ನಾಗರಿಕರಿಗೆ ಪರಿಹಾರ ಒದಗಿಸುವುದು ಮತ್ತು ಅವರ ಜೀವನ ಮತ್ತಷ್ಟು ಸುಲಭಗೊಳಿಸುವುದು ನಮ್ಮ ಆದ್ಯ ಕರ್ತವ್ಯ ಎಂದಿದ್ದಾರೆ.
ಇದರ ಜೊತೆಗೆ ಉಜ್ವಲ ಯೋಜನೆ ಕೋಟ್ಯಂತರ ಭಾರತೀಯರಿಗೆ ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡಿದೆ. ಉಜ್ವಲ ಸಬ್ಸಿಡಿಯ ಬಗ್ಗೆ ಇಂದಿನ ನಿರ್ಧಾರವು ಕುಟುಂಬದ ಬಜೆಟ್ ಅನ್ನು ಹೆಚ್ಚು ಸುಲಭಗೊಳಿಸುತ್ತದೆ ಎಂದಿದ್ದಾರೆ.
ಪಂಚರಾಜ್ಯ ಚುನಾವಣೆ ಬಳಿಕ ತೈಲ ಬೆಲೆಗಳಲ್ಲಿ ಏರಿಕೆಯಾಗಿದ್ದರಿಂದ ವಾಹನ ಸವಾರರು ಇನ್ನಿಲ್ಲದ ಸಮಸ್ಯೆ ಅನುಭವಿಸುವಂತಾಗಿತ್ತು. ಇದೀಗ, ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಬಿಗ್ ರಿಲೀಫ್ ನೀಡಿದ್ದು, ಪೆಟ್ರೋಲ್ - ಡಿಸೇಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದೆ. ಪೆಟ್ರೋಲ್ ಮೇಲೆ ಪ್ರತಿ ಲೀಟರ್ಗೆ 8 ರೂಪಾಯಿ ಹಾಗೂ ಡಿಸೇಲ್ ಮೇಲೆ 6 ರೂಪಾಯಿ ಅಬಕಾರಿ ಸುಂಕ ಇಳಿಕೆ ಮಾಡಿದೆ. ಇದರ ಜೊತೆಗೆ ಉಜ್ವಲ್ ಗ್ಯಾಸ್ ಯೋಜನೆ ಲಾಭ ಪಡೆದುಕೊಳ್ಳುತ್ತಿರುವರಿಗೆ 200 ರೂಪಾಯಿ ಸಬ್ಸಿಡಿ ಘೋಷಣೆ ಮಾಡಲಾಗಿದ್ದು, ಸಿಮೆಂಟ್ ಬೆಲೆಯಲ್ಲಿ ಇಳಿಕೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ಉಳಿದಂತೆ ರಸಗೊಬ್ಬರದ ಮೇಲೆ ಹೆಚ್ಚುವರಿ ಸಬ್ಸಿಡಿ ನೀಡಲು ನಿರ್ಧಾರ ಮಾಡಲಾಗಿದ್ದು, ಆಮದು ಪ್ಲಾಸ್ಟಿಕ್ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ದೇಶದ ಜನಸಾಮಾನ್ಯರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.