ರಾಂಚಿ/ಕೋಲ್ಕತ್ತಾ:ಸೇನೆಗೆ ಸಂಬಂಧಿಸಿದ ಭೂ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತಂಡ ರಾಂಚಿ ಮತ್ತು ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆಸುತ್ತಿದೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಅಮಿತ್ ಅಗರ್ವಾಲ್ ಎಂಬವರು ಸೇನೆಯ ಜಮೀನಿಗೆ ನಕಲಿ ದಾಖಲೆಗಳನ್ನು ಮಾಡಿ ಭೂ ಕಬಳಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರ್ಖಂಡ್‌ನ 8 ಮತ್ತು ಪಶ್ಚಿಮ ಬಂಗಾಳದ 4 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ರಾಂಚಿಯ ಬರಿಯಾತು ಎಂಬಲ್ಲಿ 4.55 ಎಕರೆ ಭೂಮಿ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸುತ್ತಿದೆ. ಬಂಧಿತ ಅಮಿತ್ ಅಗರ್ವಾಲ್ರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ತನಿಖಾ ತಂಡವು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಅಮಿತ್ ಅಗರ್ವಾಲ್ ಮತ್ತು ವಿಷ್ಣು ಅಗರ್ವಾಲ್ ಅವರ ಮನೆ, ಕಚೇರಿಗಳ ಮೇಲೆ ದಾಖಲೆಗಳನ್ನು ಜಾಲಾಡುತ್ತಿದೆ.
ರಾಂಚಿ ಮೂಲದ ಐಎಎಸ್ ಅಧಿಕಾರಿ, ಇಬ್ಬರು ಸಬ್ ರಿಜಿಸ್ಟ್ರಾರ್‌ಗಳು ಮತ್ತು ಇಬ್ಬರು ಸಿಒಗಳು ಸಹ ಸೇನಾ ಭೂಮಿ ಮಾರಾಟದ ವಿಷಯದಲ್ಲಿ ಭಾಗಿಯಾಗಿದ್ದಾರೆ. ರಾಂಚಿಯ ಬರಿಯಾತು, ಪುಂಡಗ್, ಜವಾಹರ್ ನಗರಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.