ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಬಹುನಿರೀಕ್ಷಿತ ಪರೀಕ್ಷಾರ್ಥ ಗಗನಯಾನ ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದರ ಬೆನ್ನಲ್ಲೇ ಗಗನಯಾನ್ ಟಿವಿ-ಡಿ 1 ಟೆಸ್ಟ್ ವೆಹಿಕಲ್ ಉಡಾವಣೆಯ ವಿಡಿಯೋವೊಂದನ್ನು ಇಸ್ರೋ ಹಂಚಿಕೊಂಡಿದೆ. ಪರೀಕ್ಷಾರ್ಥ ಕ್ರೂ ಮಾಡ್ಯೂಲ್ ಗಗನಯಾನವನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಈ ಮೂಲಕ ಭಾರತವು ಗಗನಯಾನಿಗಳನ್ನು ಒಳಗೊಂಡ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿರುವ ದೇಶಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಕೆಲವು ಆರಂಭಿಕ ಸವಾಲು ಮತ್ತು ವಿಳಂಬಗಳ ಹೊರತಾಗಿಯೂ ಇಸ್ರೋ ಭಾನುವಾರ ತನ್ನ ಪರೀಕ್ಷಾರ್ಥ ನೌಕೆ ಯಶಸ್ವಿಯಾಗಿ ಪೂರೈಸಿತು. ಈ ವೇಳೆ, ಸಿಬ್ಬಂದಿ ತಪ್ಪಿಸಿಕೊಳ್ಳುವ ವ್ಯವಸ್ಥೆಯು ಉಡಾವಣಾ ವಾಹನದಿಂದ ಯಶಸ್ವಿಯಾಗಿ ಬೇರ್ಪಟ್ಟಿತು. ಬಳಿಕ ಕ್ರೂ ಮಾಡೆಲ್ ಪ್ಯಾರಾಚೂಟ್ಗಳ ಸಹಾಯದಿಂದ ಸಮುದ್ರದ ಮೇಲ್ಮೈ ಮೇಲೆ ಸುರಕ್ಷಿತವಾಗಿ ಇಳಿಯಲ್ಪಟ್ಟಿತು.
’’ಈ ಯೋಜನೆಯ ಮುಖ್ಯ ಉದ್ದೇಶ ಎಂದರೆ, ಉಡಾವಣಾ ವಾಹನದಿಂದ (ಕ್ರ್ಯೂ ಎಸ್ಕೇಪ್ ಸಿಸ್ಟಂ) ಸಿಬ್ಬಂದಿ ಸುರಕ್ಷಿತವಾಗಿ ಬೇರ್ಪಡುವ ವ್ಯವಸ್ಥೆ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುವುದಾಗಿತ್ತು. ಈ ಪರೀಕ್ಷೆಯಲ್ಲಿ ಇಸ್ರೋ ಯಶಸ್ವಿಯಾಗಿದೆ. ಗಗನಯಾನ ಪರೀಕ್ಷಾರ್ಥ ಮಿಷನ್ ಯಶಸ್ವಿಯಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ‘‘ ಎಂದು ಇಸ್ರೋ ಅಧ್ಯಕ್ಷರು ಹೇಳಿದ್ದಾರೆ.
’’ಈ ಯೋಜನೆಯು ಪ್ರಮುಖವಾಗಿ ಸಿಬ್ಬಂದಿಯನ್ನು ಉಡಾವಣಾ ವಾಹನದಿಂದ ಬೇರ್ಪಡಿಸಿ, ನಿಗದಿತ ಕಕ್ಷೆಯಲ್ಲಿ ನೆಲೆಗೊಳಿಸಿ, ಆ ಬಳಿಕ ಮತ್ತೆ ಭೂಮಿಗೆ ವಾಪಸ್ ಕರೆ ತರುವ ವ್ಯವಸ್ಥೆಯನ್ನು ಪರೀಕ್ಷೆ ಮಾಡುವುದಾಗಿತ್ತು. ಅಂದ ಹಾಗೆ ಈ ಉಡಾವಣಾ ವಾಹನವು ಶಬ್ದಕ್ಕಿಂತ ಹೆಚ್ಚಿನ ವೇಗದಲ್ಲಿ, ಬಾಹ್ಯಾಕಾಶಕ್ಕೆ ನೆಗೆಯುತ್ತದೆ. ಇಂತಹ ಸಂದರ್ಭದಲ್ಲಿ ಕ್ರ್ಯೂ ಎಸ್ಕೇಪ್ ಸಿಸ್ಟಂ ಉಡಾವಣಾ ವಾಹನದಿಂದ ಬೇರ್ಪಡಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ನಾವೀಗ ಯಶಸ್ವಿಯಾಗಿದ್ದೇವೆ.