ಕರ್ನಾಟಕ

karnataka

ETV Bharat / bharat

ನಾಳೆ 'ಆದಿತ್ಯ-ಎಲ್1' ಉಡ್ಡಯನ: ಇಸ್ರೋ ತಿಳಿಸಿದ 3 ಸಂಗತಿಗಳಿವು.. - ಸೂರ್ಯನಿಂದ ಎಷ್ಟು ದೂರ

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್​ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೆಪ್ಟೆಂಬರ್​ 2ರಂದು (ನಾಳೆ) ಬೆಳಗ್ಗೆ 11:50ಕ್ಕೆ ನಭಕ್ಕೆ ಚಿಮ್ಮಲಿರುವ ಆದಿತ್ಯ-ಎಲ್1 ಬಗ್ಗೆ ಇಸ್ರೋ ಹೊಸ ಮಾಹಿತಿ ನೀಡಿದೆ.

Isro Shares ADITYA L1 Mission Details
ನಾಳೆ ನಭಕ್ಕೆ ಚಿಮ್ಮಲಿದೆ ಆದಿತ್ಯ-ಎಲ್1 ಉಪಗ್ರಹ: ಸೂರ್ಯನಿಂದ ಎಷ್ಟು ದೂರದಲ್ಲಿ ಅಧ್ಯಯನ?

By ETV Bharat Karnataka Team

Published : Sep 1, 2023, 9:39 PM IST

Updated : Sep 1, 2023, 9:54 PM IST

ನವದೆಹಲಿ:ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಂಶೋಧನಾ ಸಂಸ್ಥೆಯ (ಇಸ್ರೋ) ಆದಿತ್ಯ-ಎಲ್1 ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಾಳೆ (ಶನಿವಾರ) ಬೆಳಗ್ಗೆ 11:50ಕ್ಕೆ ನೌಕೆ ನಭಕ್ಕೆ ಚಿಮ್ಮಲಿದೆ. ಇದಕ್ಕೂ ಮುನ್ನ ದಿನವಾದ ಇಂದು ಇಸ್ರೋ ಕೆಲ ವಾಸ್ತವ ಸಂಗತಿಗಳನ್ನು ತಿಳಿಸಿದೆ.

ಆದಿತ್ಯ-ಎಲ್1 ಸೂರ್ಯನ ಸಮಗ್ರ ಅಧ್ಯಯನಕ್ಕೆ ಮೀಸಲಾದ ನೌಕೆ. ಸ್ಥಳೀಯವಾಗಿ ಅಭಿವೃದ್ಧಿ ಪಡಿಸಲಾದ 7 ವಿಭಿನ್ನವಾದ ಪೇಲೋಡ್‌ಗಳನ್ನು (ಉಪಕರಣ) ಹೊಂದಿದೆ. ಏಳರ ಪೈಕಿ ಇಸ್ರೋ ಐದು ಮತ್ತು ಇಸ್ರೋ ಸಹಯೋಗದೊಂದಿಗೆ ಭಾರತೀಯ ಶೈಕ್ಷಣಿಕ ಸಂಸ್ಥೆಗಳು ಎರಡು ಪೇಲೋಡ್‌ಗಳನ್ನು ಅಭಿವೃದ್ಧಿಪಡಿಸಿವೆ. ಸಂಸ್ಕೃತದಲ್ಲಿ ಆದಿತ್ಯ ಎಂದರೆ ಸೂರ್ಯ. ಎಲ್​1 ಎಂಬುದು ಬಾಹ್ಯಾಕಾಶದಲ್ಲಿ ಉಪಗ್ರಹ ನಿಲ್ಲುವ ಲಾಗ್ರೇಂಜ್ ಪಾಯಿಂಟ್-1 (Lagrange Point-1) ಎಂದು ಇಸ್ರೋ ಹೇಳಿದೆ.

ಇದು ಸೂರ್ಯ ಮತ್ತು ಭೂಮಿ ಎರಡು ಆಕಾಶಕಾಯಗಳ ಗುರುತ್ವಾಕರ್ಷಣೆಯ ಬಲಗಳು ಸಮತೋಲನದಲ್ಲಿರುತ್ತವೆ. ಅಲ್ಲದೇ, ಎರಡಕ್ಕೂ ಸಂಬಂಧಿಸಿದಂತೆ ಅಲ್ಲಿರಿಸಲಾದ ವಸ್ತುವು ತುಲನಾತ್ಮಕವಾಗಿ ಸ್ಥಿರವಾಗಿರಲು ಇದು ಅನುವು ಮಾಡಿಕೊಡುತ್ತದೆ. ಉಡಾವಣೆಯ ನಂತರ, ಆದಿತ್ಯ-ಎಲ್​1 16 ದಿನಗಳ ಕಾಲ ಭೂಮಿಯ ಕಕ್ಷೆಯಲ್ಲಿ ಸುತ್ತುತ್ತದೆ. ಈ ಸಮಯದಲ್ಲಿ ತನ್ನ ಪ್ರಯಾಣಕ್ಕೆ ಅಗತ್ಯವಾದ ವೇಗವನ್ನು ಪಡೆಯಲು ಐದು ಕುಶಲತೆಗೆ ಒಳಗಾಗುತ್ತದೆ ಎಂದು ಮಾಹಿತಿ ನೀಡಿದೆ.

1. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿ ಅಧ್ಯಯನ: ಆದಿತ್ಯ-ಎಲ್1 ಭೂಮಿಯಿಂದ ಸೂರ್ಯನ ಕಡೆಗೆ ಸರಿಸುಮಾರು 1.5 ಮಿಲಿಯನ್ ಕಿಮೀ(15 ಲಕ್ಷ ಕಿ.ಮೀ) ದೂರದಲ್ಲಿ ನಿಲ್ಲುತ್ತದೆ. ಇದು ಭೂಮಿ ಹಾಗೂ ಸೂರ್ಯನ ನಡುವಿನ ಅಂತರದ ಸುಮಾರು ಶೇ.1ರಷ್ಟು ಮಾತ್ರ!.

2. ಉದ್ದೇಶ- ಸೂರ್ಯನ ಹೊರಗಿನ ವಾತಾವರಣದ ಅಧ್ಯಯನ: ಸೂರ್ಯ ಅನಿಲಗಳನ್ನು ತುಂಬಿಕೊಂಡಿರುವ ದೈತ್ಯ ಗೋಳ. ಆದಿತ್ಯ-ಎಲ್​1 ಸೂರ್ಯನ ಹೊರಗಿನ ವಾತಾವರಣದ ಅಧ್ಯಯನ ಮಾಡುತ್ತದೆ.

3. ಆದಿತ್ಯ-ಎಲ್​1 ಸೂರ್ಯನ ಮೇಲೆ ಇಳಿಯುವುದಿಲ್ಲ, ಸಮೀಪವೂ ಹೋಗುವುದಿಲ್ಲ: ಆದಿತ್ಯ-ಎಲ್​1 ಸೂರ್ಯನ ಮೇಲೆ ಇಳಿಯುವುದಿಲ್ಲ ಅಥವಾ ಸೂರ್ಯನನ್ನು ಸಮೀಪವೂ ಹೋಗುವುದಿಲ್ಲ ಎಂದು ಇಸ್ರೋ ಸ್ಪಷ್ಟಪಡಿಸಿದೆ.

ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ಅನ್ನು ಇಸ್ರೋ ಯಶಸ್ವಿಯಾಗಿ ಇಳಿಸಿದೆ. ಈಗಾಗಲೇ ವಿಕ್ರಮ್​ ಲ್ಯಾಂಡರ್​ ಹಾಗೂ ಪ್ರಜ್ಞಾನ್ ರೋವರ್​ ಮೂಲಕ ಚಂದ್ರನಲ್ಲಿನ ಹೊಸ-ಹೊಸ ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ ಇಸ್ರೋ ಸೂರ್ಯನ ಅಧ್ಯಯನದಂತಹ ಮಹತ್ವದ ಬಾಹ್ಯಾಕಾಶದ ಪ್ರಯಣ ಆರಂಭಿಸುವ ನಿರ್ಧಾರ ಕೈಗೊಂಡಿದೆ. ಇದು ಚಂದ್ರನಿಗಿಂತ ನಾಲ್ಕು ಪಟ್ಟು ದೂರದ ಪ್ರಯಾಣವಾಗಿದೆ. ಆದಿತ್ಯ-ಎಲ್1 ಇಸ್ರೋ ನಡೆಸುತ್ತಿರುವ ಮೊದಲ ಸೂರ್ಯನ ಅಧ್ಯಯನ ಉಪಗ್ರಹವೂ ಹೌದು.

ಇದನ್ನೂ ಓದಿ:Aditya-L1 ಬಗ್ಗೆ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕರಿಂದ ಸಂಪೂರ್ಣ ಮಾಹಿತಿ

Last Updated : Sep 1, 2023, 9:54 PM IST

ABOUT THE AUTHOR

...view details