ಚೆನ್ನೈ( ತಮಿಳುನಾಡು):ಚಂದ್ರಯಾನ ಕೇವಲ ಚಂದ್ರನ ಮೇಲೆ ನೀರು ಇರುವುದನ್ನು ಪತ್ತೆ ಹಚ್ಚಲು ಮಾತ್ರ ಕಳುಹಿಸಲಾಗಿಲ್ಲ. ಜೊತೆಗೆ ಭವಿಷ್ಯದಲ್ಲಿ ಮಾನವರನ್ನು ಚಂದ್ರನಲ್ಲಿಗೆ ಕಳುಹಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ಭವಿಷ್ಯದಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಹೊಂದಿದೆ ಎಂದು ಚಂದ್ರಯಾನ 3 ಯೋಜನೆಯ ನಿರ್ದೇಶಕ ಡಾ. ವೀರಮುತ್ತುವೇಲ್ ತಿಳಿಸಿದ್ದಾರೆ.
ಬುಧವಾರ ಚೆನ್ನೈ ತಾಂಬರಂನ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಡಾ. ವೀರಮುತ್ತುವೇಲ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಭಾರತದ ಬಾಹ್ಯಾಕಾಶ ಸಂಸ್ಥೆಯ ಭವಿಷ್ಯದ ಯೋಜನೆಗಳ ಬಗೆಗಿನ ಕನಸು ಹಾಗೂ ಯೋಜನೆಗಳನ್ನ ಬಿಚ್ಚಿಟ್ಟರು.
ನಂತರ ಮುಂದುವರಿಸಿ, "ನನ್ನ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು, ಸನ್ಮಾನ ಸ್ವೀಕರಿಸಿರುವುದು ನನಗೆ ಹೆಮ್ಮೆಯಾಗುತ್ತಿದೆ. ಹಲವು ವರ್ಷಗಳ ನಂತರ ಕಾಲೇಜಿನಿಂದ ನನ್ನ ಸ್ನೇಹಿತರನ್ನು ಭೇಟಿಯಾಗಿರುವುದು ಕೂಡಾ ಸಂತಸ ತಂದಿದೆ ಎಂದರು. ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ. ಅದರಲ್ಲೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಯಾವ ಶಾಖೆಯನ್ನು ಆಯ್ಕೆ ಮಾಡಿದ್ದರೂ, ಎಲ್ಲರಿಗೂ ಉಜ್ವಲ ಭವಿಷ್ಯವಿದೆ. ವಿದ್ಯಾರ್ಥಿಗಳು ಮಹತ್ವಾಕಾಂಕ್ಷೆ ಹಾಗೂ ಪ್ರಗತಿಯೊಂದಿಗೆ ಅಧ್ಯಯನ ಮಾಡಬೇಕು" ಎಂದು ಅವರು ಇದೇ ವೇಳೆ ಕಿವಿಮಾತು ಹೇಳಿದರು.