ತಿರುವನಂತಪುರಂ (ಕೇರಳ): ತಮ್ಮ ಆತ್ಮಚರಿತ್ರೆಯ ಪುಸಕ್ತದ ಪ್ರಕಟಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಶನಿವಾರ ಹೇಳಿದ್ದಾರೆ. ತಮ್ಮ 'ನಿಲಾವು ಕುಡಿಚ್ಚ ಸಿಂಹಂಗಳ್' ಆತ್ಮಚರಿತ್ರೆಯಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ ಬಗ್ಗೆ ಕೆಲವು ವಿಮರ್ಶಾತ್ಮಕ ಟೀಕೆಗಳು ಮಾಡಲಾಗಿದೆ ಎಂಬುವುದು ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೆ ಪುಸ್ತಕದ ಪ್ರಕಟಣೆಯನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಸೋಮನಾಥ್ ಖಚಿತಪಡಿಸಿದ್ದಾರೆ.
ಸೋಮನಾಥ್ ಅವರು ತಮ್ಮ 15 ಅಧ್ಯಾಯಗಳ ಪುಸ್ತಕದಲ್ಲಿ ಇಸ್ರೋದ ಒಳ ರಾಜಕೀಯವನ್ನು ಬಹಿರಂಗಪಡಿಸಿದ್ದಾರೆ. ಹಿರಿಯ ವಿಜ್ಞಾನಿಗಳ ನಡುವಿನ ಪೈಪೋಟಿ ಮತ್ತು ಭಿನ್ನಾಭಿಪ್ರಾಯದ ಬಗ್ಗೆ ಉಲ್ಲೇಖಿಸಿದ್ದಾರೆ. ಅಧ್ಯಾಯವೊಂದರಲ್ಲಿ ಪ್ರತಿಷ್ಠಿತ ಜಿಎಸ್ಎಲ್ವಿ ಮಿಷನ್ಅನ್ನು ಹಾಳುಮಾಡಲು ವಿಜ್ಞಾನಿಗಳ ಕೆಲವು ವಿಭಾಗಗಳು ಯೋಜಿಸಿದ್ದವು ಎಂದು ಬಹಿರಂಗಪಡಿಸಿದ್ದರು.
ಇಸ್ರೋದ ಮಾಜಿ ಅಧ್ಯಕ್ಷ ಕೆ.ಶಿವನ್ ಅವರು ತಮ್ಮನ್ನು ಇಸ್ರೋ ಅಧ್ಯಕ್ಷ ಸ್ಥಾನದಿಂದ ದೂರ ಇಡಲು ಪ್ರಯತ್ನಿಸಿದ್ದರು. ಎ.ಎಸ್. ಕಿರಣ್ ಕುಮಾರ್ ಅವರ ನಿವೃತ್ತಿಯ ನಂತರ ತಾವು ಮತ್ತು ಕೆ.ಶಿವನ್ ಇಸ್ರೋದ ಉನ್ನತ ಹುದ್ದೆಗೆ ಮುಂಚೂಣಿಯಲ್ಲಿದ್ದೆವು ಎಂದೂ ಬರೆದಿದ್ದರು.
2018ರಲ್ಲಿ ಶಿವನ್ ಸೇವೆ ವಿಸ್ತರಣೆಯಲ್ಲಿದ್ದರು. ನನಗೂ ಸ್ವಲ್ಪ ಭರವಸೆ ಇತ್ತು. ನಮ್ಮಿಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲಾಗಿದ್ದರೂ ಅಂತಿಮ ನಿರ್ಧಾರ, ಕೆ. ಶಿವನ್ ಪರವಾಗಿತ್ತು. ಆದರೆ, ಇಸ್ರೋ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರವೂ ನಾನು ಅರ್ಹತೆ ಹೊಂದಿದ್ದ ವಿಎಸ್‌ಎಸ್‌ಸಿ ನಿರ್ದೇಶಕ ಸ್ಥಾನವನ್ನು ಶಿವನ್ ಬಿಡಲು ಸಿದ್ಧರಿರಲಿಲ್ಲ. ಈ ಬಗ್ಗೆ ನೇರವಾಗಿ ಕೇಳಿದಾಗ ನುಣುಚಿಕೊಂಡರು ಎಂದು ಆರೋಪಿಸಿದ್ದರು.