ರಾಯ್ಪುರ/ ಕೋಲ್ಕತಾ: ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳ ಸಾಲಿನಲ್ಲಿ ಭಾರತವನ್ನು ತಂದು ನಿಲ್ಲಿಸಿದ ಇಸ್ರೋದ ಯಶಸ್ವಿ ಚಂದ್ರಯಾನ-3 ಯೋಜನೆಯ ಗಗನನೌಕೆಯಂತೆ ಗಣೇಶ ಚೌತಿ ಹಬ್ಬದ ಪೆಂಡಾಲ್ ನಿರ್ಮಿಸಲಾಗುತ್ತಿದೆ. 120 ಅಡಿ ಎತ್ತರದಲ್ಲಿ ಗಗನ ನೌಕೆಯನ್ನು ಹೋಲುವ ವಿಶೇಷ ಪೆಂಡಾಲ್ ಅನ್ನು ಕೋಲ್ಕತಾದಲ್ಲಿ ಕುಶಲಕರ್ಮಿಗಳು ನಿರ್ಮಿಸಿದ್ದು, ಜನಾಕರ್ಷಣೆ ಪಡೆಯುತ್ತಿದೆ.
ಛತ್ತೀಸ್‌ಗಢದ ರಾಯ್ಪುರದಲ್ಲೂ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಗಣೇಶನಿಗೆ ತಾತ್ಕಾಲಿಕವಾಗಿ ನಿರ್ಮಿಸಿರುವ ಗುಡಿಯನ್ನು (ಪೆಂಡಾಲ್) ಚಂದ್ರಯಾನ ಮಾದರಿಯಲ್ಲಿ ರಚಿಸಲಾಗಿದೆ.
ದೇಶದ ವಿವಿಧೆಡೆ ಗಣೇಶೋತ್ಸವ ಸಮಿತಿಗಳು ವಿವಿಧ ಬಗೆಯ ಥೀಮ್‌ಗಳಲ್ಲಿ ಆಕರ್ಷಕ ಪೆಂಡಾಲ್‌ಗಳನ್ನು ವಿನ್ಯಾಸಗೊಳಿಸಿ, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆಚರಿಸಲಾಗುತ್ತಿದೆ. ಕೋಲ್ಕತಾದಲ್ಲಿ ಕಾಳಿ ಬರಿಯಲ್ಲಿ ಚಂದ್ರಯಾನ ಮಿಷನ್ ಬಿಂಬಿಸುವಂತಹ ಥೀಮ್ ಆಧಾರಿತ ಪೆಂಡಾಲ್ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಧಾವಿಸುತ್ತಿದ್ದಾರೆ. 120 ಅಡಿ ಎತ್ತರ ಮತ್ತು 70 ಅಡಿ ಅಗಲವಿರುವ ಪಿಎಸ್ಎಲ್‌ವಿ ರಾಕೆಟ್ ಪ್ರತಿಕೃತಿಯನ್ನು ಇಲ್ಲಿ ನೋಡಬಹುದು.
ಕೋಲ್ಕತಾದ ಮೂವತ್ತು ಕುಶಲಕರ್ಮಿಗಳು ಪೆಂಡಾಲ್ ನಿರ್ಮಿಸಿದ್ದು, ಸಾವಿರಾರು ಬಿದಿರಿನ ಕಂಬಗಳು ಹಾಗೂ ಪ್ಲೈವುಡ್ ಬಳಸಲಾಗಿದೆ. ಹಗಲಿರುಳು ಶ್ರಮಿಸಿರುವ ಕುಶಲಕರ್ಮಿಗಳು ಇದನ್ನು ರಚಿಸಲು 45 ದಿನಗಳನ್ನು ತೆಗೆದುಕೊಂಡಿದ್ದಾರೆ.