ಕರ್ನಾಟಕ

karnataka

ETV Bharat / bharat

ಹಾಸ್ಟೆಲ್‌ನ ಸಾಧಾರಣ ಕೊಠಡಿಯಲ್ಲಿ ವಾಸ, ಹಳೆಯ ಸೈಕಲ್‌ ಸವಾರಿ: ಇಸ್ರೋ ಅಧ್ಯಕ್ಷರ ಆತ್ಮಚರಿತ್ರೆ​ ಶೀಘ್ರದಲ್ಲೇ ಮಾರುಕಟ್ಟೆಗೆ

ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ತಮ್ಮ ಜೀವನಗಾಥೆಯನ್ನು ವಿವರಿಸಲು ಮಲಯಾಳಂನಲ್ಲಿ ಪುಸ್ತಕ ಹೊರತರಲಿದ್ದಾರೆ. ಇದೇ ನವೆಂಬರ್​ನಲ್ಲಿ ಗ್ರಾಹಕರ ಕೈ ಸೇರಲಿದೆ.

ಸೋಮನಾಥನ್​ ಆತ್ಮಚರಿತ್ರೆ
ಸೋಮನಾಥನ್​ ಆತ್ಮಚರಿತ್ರೆ

By PTI

Published : Oct 25, 2023, 4:59 PM IST

ತಿರುವನಂತಪುರಂ:ಗಗನಯಾನ ಪ್ರಾಯೋಗಿಕ ಪರೀಕ್ಷೆ, ಮಾನವಸಹಿತ ಗಗನಯಾನ, ಸೂರ್ಯನ ಅಧ್ಯಯನಕ್ಕೆ ಆದಿತ್ಯ-ಎಲ್​1 ಯೋಜನೆ.. ಹೀಗೆ ಸಾಲು ಸಾಲು ಬಾಹ್ಯಾಕಾಶ ಸಂಶೋಧನೆಗಳಲ್ಲಿ ತೊಡಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಡಾ.ಸೋಮನಾಥ್​ ಅವರು ಶೀಘ್ರದಲ್ಲೇ ತಮ್ಮ ಆತ್ಮಚರಿತ್ರೆಯ ಪುಸ್ತಕವನ್ನು ಹೊರತರಲಿದ್ದಾರೆ.

'ನಿಲಾವು ಕುಡಿಚ್ಚ ಸಿಂಹಂಗಳ್​' ಹೆಸರಿನ ಆತ್ಮಕಥನ ಮಲಯಾಳಂ ಭಾಷೆಯಲ್ಲಿ ಬರಲಿದೆ. ಇದರಲ್ಲಿ ಅವರು ಕಾಲೇಜು ಅಧ್ಯಯನ ವೇಳೆ ಹಾಸ್ಟೆಲ್​ ವೆಚ್ಚ ಕಡಿತಗೊಳಿಸಲು ಸಾಧಾರಣ ಕೊಠಡಿಯಲ್ಲಿ ವಾಸ, ಸಾರಿಗೆ ವೆಚ್ಚ ಉಳಿಸಲು ಹಳೆಯ ಸೈಕಲ್​ ಬಳಕೆ ವಿಚಾರಗಳನ್ನು ನಮೂದಿಸಿದ್ದಾರೆ. ಇದೊಂದು ಪ್ರೇರಣದಾಯಕ ಕಥೆಯಾಗಿದೆ. ಕಷ್ಟಕಾಲದಲ್ಲಿ ಕಠಿಣ ಪರಿಶ್ರಮದ ಶಕ್ತಿಯನ್ನು ಪುಸ್ತಕ ಕೇಂದ್ರೀಕರಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಸಾಲು ಸಾಲು ಯೋಜನೆಗಳು:ಚಂದ್ರಯಾನದ ಯಶಸ್ಸಿನ ನಂತರ ಸೂರ್ಯನ ಅಧ್ಯಯನಕ್ಕಾಗಿ ಹಾರಿಬಿಡಲಾಗಿರುವ ಆದಿತ್ಯ-ಎಲ್1, ಮಾನವಸಹಿತ ಗಗನಯಾನಕ್ಕಾಗಿ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಸೋಮನಾಥ್ ಅವರು ಬ್ಯುಸಿಯಾಗಿದ್ದರೂ, ತಮ್ಮ ಜೀವನಗಾಥೆಯನ್ನು ವಿವರಿಸಲು ಸಮಯವನ್ನು ಮೀಸಲಿಟ್ಟುಕೊಂಡಿದ್ದಾರೆ.

ಕೇರಳ ಮೂಲದ ಲಿಪಿ ಪಬ್ಲಿಕೇಷನ್ಸ್‌ನಿಂದ ಪ್ರಕಟವಾಗುತ್ತಿರುವ ಈ ಪುಸ್ತಕವು ನವೆಂಬರ್‌ನಲ್ಲಿ ಹೊರಬರಲಿದೆ. ಇದು ಒಬ್ಬ ಹಳ್ಳಿಯ ಬಡ ಯುವಕನ ಸಾಹಸಗಾಥೆಯಾಗಿದೆ. ಭಾರತದಂತಹ ದೇಶದಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ಬೆಳೆಯುವ ಬಗೆಯನ್ನು ಇದು ವಿವರಿಸಿದೆ. ಇಸ್ರೋದಲ್ಲಿ ಆರಂಭಿಕ, ಉನ್ನತ ಹುದ್ದೆಗಳಿಗೆ ಪದೋನ್ನತಿ, ಚಂದ್ರಯಾನ-3 ಉಡಾವಣೆಯವರೆಗಿನ ಪ್ರಯಾಣದ ಪ್ರಸಂಗಗಳಿದ್ದರೂ, ಇದೊಂದು ಸ್ಫೂರ್ತಿದಾಯಕ ಕಥೆ ಎಂದು ಸೋಮನಾಥ್​ ಹೇಳಿದ್ದಾರೆ.

ಕಷ್ಟಗಳ ಮಧ್ಯೆ ಕನಸು ಬೆನ್ನಟ್ಟಿ:ಇಂಜಿನಿಯರಿಂಗ್ ಅಥವಾ ಬಿಎಸ್ಸಿಗೆ ಸೇರಬೇಕೇ ಎಂದು ಗೊಂದಲದಲ್ಲಿದ್ದ ಸಾಮಾನ್ಯ ಹಳ್ಳಿಯ ಯುವಕ, ತನ್ನ ಕಷ್ಟದ ಜೀವನದಲ್ಲಿ ತೆಗೆದುಕೊಂಡ ಸರಿಯಾದ ನಿರ್ಧಾರಗಳು ಮತ್ತು ಭಾರತದಂತಹ ದೇಶದಲ್ಲಿ ಆತ ಪಡೆದ ಅವಕಾಶಗಳಿಂದಾಗಿ ಬೆಳೆದು ಬಂದ ಬಗೆ ಇದರಲ್ಲಿದೆ. ಈ ಪುಸ್ತಕವು ನನ್ನ ಜೀವನದ ಕಥೆಯನ್ನು ಹೇಳುವ ಬದಲಿಗೆ, ಜೀವನದಲ್ಲಿ ಪ್ರತಿಕೂಲತೆಗಳ ಮಧ್ಯೆಯೂ ಕನಸುಗಳನ್ನು ಬೆನ್ನಟ್ಟಲು ಪ್ರೇರೇಪಿಸುವ ಉದ್ದೇಶ ಹೊಂದಿದೆ ಎಂದು ಇಸ್ರೋ ಅಧ್ಯಕ್ಷರು ಹೇಳಿದರು.

ಚಂದ್ರಯಾನ-3 ರ ಐತಿಹಾಸಿಕ ಯಶಸ್ಸು ಪುಸ್ತಕವನ್ನು ಶೀಘ್ರವೇ ಹೊರತರುವಂತೆ ಮಾಡಿದೆ. ಚಂದ್ರಯಾನವು ಸಮಾಜದಲ್ಲಿ ತುಂಬಾ ಪ್ರಭಾವ ಬೀರಿದೆ. ಅದರ ಯಶಸ್ಸಿನಿಂದ ಎಷ್ಟು ಜನರು, ವಿಶೇಷವಾಗಿ ಮಕ್ಕಳು ಸ್ಫೂರ್ತಿ ಪಡೆದಿದ್ದಾರೆಂದು ನಾವು ನೋಡಬಹುದು. ಭಾರತ ಮತ್ತು ಭಾರತೀಯರು ಎಂಥದ್ದೇ ಮಹತ್ತರವಾದ ಕೆಲಸಗಳನ್ನು ಮಾಡಬಹುದು ಎಂಬುದು ಈ ಮೂಲಕ ಸಾಬೀತಾಗಿದೆ ಎಂದರು.

ಇದನ್ನೂ ಓದಿ:ಅಕ್ಟೋಬರ್​ 29ರಂದು ಭಾಗಶಃ ಚಂದ್ರಗ್ರಹಣ; ಇಲ್ಲಿದೆ ಸಂಪೂರ್ಣ ಮಾಹಿತಿ

ABOUT THE AUTHOR

...view details