ಕಣ್ಣೂರು, ಕೇರಳ:ಕಳೆದ 13 ದಿನಗಳಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಈ ಯುದ್ಧದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಯುದ್ಧವನ್ನು ಹಮಾಸ್ ಅಕ್ಟೋಬರ್ 7 ರಂದು ಪ್ರಾರಂಭಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ತನ್ನ ದಾಳಿಯನ್ನು ಮುಂದುವರಿಸಿತು. ಇಸ್ರೇಲಿ ಸೈನಿಕರು ಹಮಾಸ್ ಭಯೋತ್ಪಾದಕರ ಮೇಲೆ ದಾಳಿ ನಡೆಸಿದ್ದಾರೆ.
ಇಸ್ರೇಲಿ ಪೊಲೀಸರು ಕೇರಳದೊಂದಿಗೆ ಬಲವಾದ ವ್ಯಾಪಾರ ಸಂಬಂಧವನ್ನು ಹೊಂದಿದ್ದಾರೆ. ಕಳೆದ 8 ವರ್ಷಗಳಿಂದ ಕಣ್ಣೂರು ಮೂಲದ 'ಮೇರಿಯನ್ ಅಪರಲ್ ಪ್ರೈವೇಟ್ ಲಿಮಿಟೆಡ್' ಹೆಸರಿನ ಕಂಪನಿ ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಪೂರೈಸುತ್ತಿದೆ. ಇದರ ಪ್ರಧಾನ ಕಚೇರಿ ಮುಂಬೈನಲ್ಲಿದೆ ಮತ್ತು ಇದನ್ನು ಮುಂಬೈ ಮೂಲದ ಕೇರಳದ ಥಾಮಸ್ ಒಲಿಕಲ್ ನಡೆಸುತ್ತಿದ್ದಾರೆ. ಕಂಪನಿಯು ಪ್ರತಿ ವರ್ಷ ಇಸ್ರೇಲಿ ಪೊಲೀಸರಿಗೆ ಸುಮಾರು 1 ಲಕ್ಷ ಸಮವಸ್ತ್ರಗಳನ್ನು ಪೂರೈಸುತ್ತದೆ. ರಾಜಕೀಯವಾಗಿ ಅಸ್ಥಿರವಾಗಿರುವ ಕಣ್ಣೂರು ಕೈಮಗ್ಗ ತಯಾರಿಕೆ ಮತ್ತು ಜವಳಿ ರಫ್ತಿನ ಅದ್ಭುತ ಸಂಪ್ರದಾಯಕ್ಕೆ ಹೆಸರು ವಾಸಿಯಾಗಿದೆ.
ಕಣ್ಣೂರಲ್ಲಿ ತಯಾರಾಗುತ್ತೆ ಇಸ್ರೇಲ್ ಯೋಧರ ಸಮವಸ್ತ್ರ:ಈ ಬಗ್ಗೆ ಮಾತನಾಡಿದ ಇಡುಕ್ಕಿ ಜಿಲ್ಲೆಯ ತೊಡುಪುಳ ಮೂಲದ ಥಾಮಸ್, ಯುದ್ಧ ಪ್ರಾರಂಭವಾದ ನಂತರವೂ ಇಸ್ರೇಲ್ ಪೊಲೀಸರು ಕಂಪನಿಯನ್ನು ಸಂಪರ್ಕಿಸಿ ಹೆಚ್ಚಿನ ಸಮವಸ್ತ್ರಗಳಿಗಾಗಿ ಹೆಚ್ಚುವರಿ ಆದೇಶಗಳನ್ನು ನೀಡಿದ್ದಾರೆ. ರಫ್ತು ಮಾಡುವ ಮೊದಲು ಉತ್ಪನ್ನಗಳ ಗುಣಮಟ್ಟವನ್ನು ಪರಿಶೀಲಿಸಲು ಪ್ರತಿ ವರ್ಷ ಇಸ್ರೇಲಿ ಅಧಿಕಾರಿಗಳು ಕಣ್ಣೂರಿಗೆ ಬರುತ್ತಾರೆ. ಇಸ್ರೇಲಿ ಅಧಿಕಾರಿಗಳು ಈ ವರ್ಷದಿಂದ ಹೊಸ ಉತ್ಪನ್ನಕ್ಕೆ ಆರ್ಡರ್ ನೀಡಿದ್ದು, ಇದನ್ನು ಡಿಸೆಂಬರ್‌ನೊಳಗೆ ಮೊದಲ ಹಂತವನ್ನು ಕಳುಹಿಸಿಕೊಡಲಾಗುವುದು ಎಂದು ಥಾಮಸ್ ವಿವರಿಸಿದರು.
ನಾವು ಕಳೆದ ಎಂಟು ವರ್ಷಗಳಿಂದ ಇಸ್ರೇಲ್ ಪೊಲೀಸರಿಗೆ ವಾರ್ಷಿಕವಾಗಿ ಒಂದು ಲಕ್ಷ ಸಮವಸ್ತ್ರದ ಶರ್ಟ್‌ಗಳನ್ನು ಪೂರೈಸುತ್ತಿದ್ದೇವೆ. ಇಸ್ರೇಲ್‌ನಂತಹ ಉನ್ನತ ದರ್ಜೆಯ ಪೊಲೀಸ್ ಪಡೆಗೆ ನಾವು ಶರ್ಟ್‌ಗಳನ್ನು ಪೂರೈಸುತ್ತಿದ್ದೇವೆ ಎಂಬುದು ನಮಗೆ ನಿಜವಾಗಿಯೂ ಹೆಮ್ಮೆಯ ವಿಷಯವಾಗಿದೆ ಎಂದು ಒಲಿಕಲ್ ಹೇಳಿದ್ದಾರೆ.
2006 ರಲ್ಲಿ ಪ್ರಾರಂಭವಾದ ಕಿನ್‌ಫ್ರಾ ಪಾರ್ಕ್:2006 ರಲ್ಲಿ ಇಲ್ಲಿನ ಸರ್ಕಾರಿ ಸ್ವಾಮ್ಯದ ಕಿನ್‌ಫ್ರಾ ಪಾರ್ಕ್‌ನಲ್ಲಿ ಪ್ರಾರಂಭವಾದ ಕಂಪನಿಯು ಪ್ರಪಂಚದಾದ್ಯಂತದ ವಿವಿಧ ದೇಶಗಳ ಸೇನಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಭದ್ರತಾ ಅಧಿಕಾರಿಗಳು ಮತ್ತು ಆರೋಗ್ಯ ಸೇವಾ ಕಾರ್ಯಕರ್ತರ ಸಮವಸ್ತ್ರ ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿದೆ. ಇದು ಶಾಲಾ ಸಮವಸ್ತ್ರಗಳು, ಸೂಪರ್‌ಮಾರ್ಕೆಟ್ ಸಿಬ್ಬಂದಿಗೆ ಉಡುಪುಗಳು, ವೈದ್ಯರ ಕೋಟ್‌ಗಳು, ಕವರ್‌ಗಳು, ಕಾರ್ಪೊರೇಟ್ ವೇರ್‌ಗಳು ಸೇರಿದಂತೆ ಇತ್ಯಾದಿಗಳನ್ನು ತಯಾರಿಸಿ ಪೂರೈಸುತ್ತದೆ.
ಕಣ್ಣೂರಿನಲ್ಲಿ ಸಾಂಪ್ರದಾಯಿಕ ಬೀಡಿ ಉದ್ಯಮದ ಅವನತಿಯಿಂದಾಗಿ ನಿರುದ್ಯೋಗಿಗಳಾಗಿರುವ ಸ್ಥಳೀಯ ಜನರಿಗೆ ಉದ್ಯೋಗವನ್ನು ಒದಗಿಸುವ ಉದ್ದೇಶದಿಂದ ಉಡುಪು ಘಟಕವನ್ನು ಸ್ಥಾಪಿಸಲಾಯಿತು. ನಾವು ಸಮವಸ್ತ್ರ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದೇವೆ ಎಂದು ತಿಳಿದ ನಂತರ ಇಸ್ರೇಲ್ ಪೊಲೀಸರು ತಮ್ಮ ಕಂಪನಿಯನ್ನು ಸಂಪರ್ಕಿಸಿದ್ದರು. ಬಳಿಕ ಅವರ ಪ್ರತಿನಿಧಿಗಳು ಮುಂಬೈಗೆ ಬಂದು ಒಪ್ಪಂದದ ಬಗ್ಗೆ ಚರ್ಚಿಸಿದರು. ನಂತರ, ಅವರು ತಮ್ಮ ಉನ್ನತ ಅಧಿಕಾರಿಗಳು, ವಿನ್ಯಾಸಕರು ಮತ್ತು ಗುಣಮಟ್ಟ ನಿಯಂತ್ರಕರೊಂದಿಗೆ ಇಲ್ಲಿನ ಕಾರ್ಖಾನೆಗೆ ಭೇಟಿ ನೀಡಿದರು. ಅವರು ಸುಮಾರು 10 ದಿನಗಳ ಕಾಲ ಇಲ್ಲಿ ತಂಗಿದ್ದರು ಎಂದು ಥಾಮಸ್ ಹೇಳಿದರು.
ಗುಣಮಟ್ಟಕ್ಕೆ ಆದ್ಯತೆ ನೀಡುವ ಇಸ್ರೇಲಿ ಅಧಿಕಾರಿಗಳು:ಇಸ್ರೇಲಿ ಅಧಿಕಾರಿಗಳು ಪರಿಪೂರ್ಣತೆಯ ಬಗ್ಗೆ ತುಂಬಾ ನಿರ್ದಿಷ್ಟವಾಗಿದ್ದಾರೆ ಮತ್ತು ಅದು ಸಂಪೂರ್ಣವಾಗಿ ಫಿಟ್ ಆಗಿದ್ದರೆ, ಗುಣಮಟ್ಟವು ಚೆನ್ನಾಗಿದ್ದರೆ ಮಾತ್ರ ಅವರು ಅದನ್ನು ಸ್ವೀಕರಿಸುತ್ತಾರೆ. ನಡೆಯುತ್ತಿರುವ ಯುದ್ಧವು ಬೇಗನೆ ಕೊನೆಗೊಳ್ಳಲು ಮತ್ತು ಆ ಪ್ರದೇಶದಲ್ಲಿ ಶಾಂತಿ ಮರಳಲು ನಾವು ಬಯಸುತ್ತೇವೆ ಎಂದು ಥಾಮಸ್ ಒಲಿಕಲ್ ಹೇಳಿದರು.
ಅಕ್ಟೋಬರ್ 7 ರಂದು ಪ್ರಾರಂಭವಾದ ಯುದ್ಧದಲ್ಲಿ 2,778 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು 9,700 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಗಾಜಾದಾದ್ಯಂತ ಇನ್ನೂ 1,200 ಜನರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ಆದ್ರೆ ಅವರು ಜೀವಂತವಾಗಿದ್ದಾರೋ ಅಥವಾ ಸಾವನ್ನಪ್ಪಿದ್ದಾರೆಯೋ ಎಂಬುದು ಇನ್ನು ತಿಳಿದುಬಂದಿಲ್ಲ. 1,400 ಕ್ಕೂ ಹೆಚ್ಚು ಇಸ್ರೇಲಿಗಳು ಮೃತಪಟ್ಟಿದ್ದಾರೆ. ಮಕ್ಕಳು ಸೇರಿದಂತೆ ಕನಿಷ್ಠ 199 ಜನರನ್ನು ಹಮಾಸ್ ವಶಪಡಿಸಿಕೊಂಡು ಗಾಜಾಕ್ಕೆ ಕರೆದೊಯ್ಯಲಾಗಿದೆ ಎಂದು ಇಸ್ರೇಲ್ ಆರೋಪ ಮಾಡಿದೆ.
ಓದಿ:ಹಮಾಸ್ ಉಗ್ರ ಗುಂಪುಗಳ ಹಣಕಾಸು ಜಾಲಗಳಿಗೆ ನಿರ್ಬಂಧ: ಗಾಜಾ, ವೆಸ್ಟ್ ಬ್ಯಾಂಕ್‌ಗೆ $100 ಮಿಲಿಯನ್ ನೆರವು ಘೋಷಿಸಿದ ಅಮೆರಿಕ