ಲಖನೌ (ಉತ್ತರಪ್ರದೇಶ) :ಹಮಾಸ್ ವಿರುದ್ಧ ಯುದ್ಧ ನಡೆಸುತ್ತಿರುವ ಇಸ್ರೇಲ್, ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿದೆ. ಕಟ್ಟಡ ನಿರ್ಮಾಣ, ಬಡಗಿ, ಕಮ್ಮಾರ ಕೆಲಸದಾಳುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಹೀಗಾಗಿ ಕಾರ್ಮಿಕರನ್ನು ಒದಗಿಸಲು ಅಲ್ಲಿನ ಸರ್ಕಾರ ಭಾರತಕ್ಕೆ ಮನವಿ ಮಾಡಿದ್ದು, ಉತ್ತರಪ್ರದೇಶದಿಂದ 16 ಸಾವಿರ ಕಾರ್ಮಿಕರು ಇಸ್ರೇಲ್‌ಗೆ ತೆರಳಲು ಸಜ್ಜಾಗಿದ್ದಾರೆ.
ನುರಿತ ಉದ್ಯೋಗಿಗಳ ತೀವ್ರ ಕೊರತೆಯನ್ನು ಎದುರಿಸುತ್ತಿರುವ, ಅದರಲ್ಲೂ ಪ್ಯಾಲೆಸ್ಟೈನ್ ಕಾರ್ಮಿಕರನ್ನೇ ನೆಚ್ಚಿಕೊಂಡಿರುವ ಇಸ್ರೇಲ್, ಭಾರತದಿಂದ ಕಾರ್ಮಿಕರ ಕಳುಹಿಸಲು ಕೋರಿದೆ. ಹೀಗಾಗಿ ಮುಂದಿನ ತಿಂಗಳಿನಿಂದ ವಿವಿಧ ರಾಜ್ಯಗಳಿಂದ ಕಾರ್ಮಿಕರು ಅಲ್ಲಿಗೆ ತೆರಳಲಿದ್ದಾರೆ. ಅದರಲ್ಲಿ ಉತ್ತರಪ್ರದೇಶ ಒಂದರಿಂದಲೇ 16 ಸಾವಿರ ಜನರು ಗುಳೆ ಹೋಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಲ್ಲಿ ಇಸ್ರೇಲ್‌ಗೆ ಕಾರ್ಮಿಕರು:ಮೊದಲ ಹಂತದಲ್ಲಿ 10 ಸಾವಿರ ನುರಿತ ಉದ್ಯೋಗಿಗಳನ್ನು ರಾಜ್ಯದಿಂದ ಕಳುಹಿಸಲಾಗುವುದು. ಇಲ್ಲಿಯವರೆಗೆ 16 ಸಾವಿರ ಕಾರ್ಮಿಕರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಇಸ್ರೇಲ್‌ಗೆ ಕಳುಹಿಸಲು ಉದ್ದೇಶಿಸಿರುವ ಕಾರ್ಮಿಕರ ಪೈಕಿ ಉತ್ತರ ಪ್ರದೇಶವೇ ಅತಿದೊಡ್ಡ ಪೂರೈಕೆದಾರನಾಗಲಿದೆ ಎಂದು ಉತ್ತರ ಪ್ರದೇಶದ ಕಾರ್ಮಿಕ ಸಚಿವ ಅನಿಲ್ ರಾಜ್‌ಭರ್ ಹೇಳಿದ್ದಾರೆ.
ಕಾರ್ಮಿಕರ ನೋಂದಣಿಗೆ ಲಖನೌದಲ್ಲಿ ಕೇಂದ್ರ ತೆರೆಯಲು ಕೇಂದ್ರ ಕಾರ್ಮಿಕ ಸಚಿವಾಲಯವನ್ನು ರಾಜ್ಯ ಸರ್ಕಾರ ಕೋರಿದೆ. ಇಸ್ರೇಲ್‌ನಲ್ಲಿ ಮೇಸ್ತ್ರಿಗಳು, ಬಡಗಿಗಳು ಮತ್ತು ಕಟ್ಟಡ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆಯಿದೆ. ಇಸ್ರೇಲ್ ಸರ್ಕಾರ ಕೇಳಿದ ಕಾರ್ಮಿಕರನ್ನು ಪೂರೈಸಲು ಅಧಿಕಾರಿಗಳು ಅಂತಿಮ ಸಿದ್ಧತೆ ನಡೆಸುತ್ತಿದ್ದಾರೆ. ಈ ಪ್ರಕ್ರಿಯೆಯು ಜನವರಿ 10 ರೊಳಗೆ ಮುಗಿಯುತ್ತದೆ. ಜನವರಿ ಅಂತ್ಯದ ವೇಳೆಗೆ ಕಾರ್ಮಿಕರು ಇಸ್ರೇಲ್‌ಗೆ ತೆರಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.