ನವದೆಹಲಿ:ಲಕ್ಷದ್ವೀಪದ ವಿಚಾರವಾಗಿ ಭಾರತ ಮತ್ತು ಪ್ರಧಾನಿ ಮೋದಿಯನ್ನು ಅವಹೇಳನಕಾರಿಯಾಗಿ ಟೀಕಿಸಿದ ವಿವಾದದಲ್ಲಿ ಇಸ್ರೇಲ್ ಎಂಟ್ರಿಯಾಗಿದೆ. ಸುಂದರ ಲಕ್ಷದ್ವೀಪವನ್ನು ಮನಮೋಹಕ ತಾಣವನ್ನಾಗಿ ಮಾಡಲು ನೆರವು ನೀಡಲಾಗುವುದು ಎಂದು ಹೇಳಿದೆ.
ಕಳೆದ ವರ್ಷವೇ ಲಕ್ಷದ್ವೀಪಕ್ಕೆ ಇಸ್ರೇಲ್ ತಂಡವೊಂದು ಭೇಟಿ ನೀಡಿದ್ದು, ದ್ವೀಪಗಳಲ್ಲಿ ನೈರ್ಮಲ್ಯೀಕರಣ ಕಾರ್ಯಕ್ರಮವನ್ನು ಪ್ರಾರಂಭಿಸಲು ಮುಂದಾಗಿತ್ತು. ಇದೀಗ ವಿವಾದದಲ್ಲಿ ಇಸ್ರೇಲ್ ಅನ್ನು ಎಳೆತಂದಿದ್ದಕ್ಕೆ ಭಾರತದ ಪರವಾಗಿ ಕೆಲಸ ಮಾಡಲು ತಾನು ಸಿದ್ಧ ಎಂದು ಸೋಮವಾರ ಘೋಷಿಸಿದೆ.
ಇಸ್ರೇಲ್ ರಾಯಭಾರ ಕಚೇರಿ ತನ್ನ ಎಕ್ಸ್ ಖಾತೆಯಲ್ಲಿ, ಲಕ್ಷದ್ವೀಪದ ಕೆಲ ಅಂದದ ಫೋಟೋಗಳನ್ನು ಹಂಚಿಕೊಂಡಿದ್ದು, ಕಳೆದ ವರ್ಷ ಭಾರತ ಸರ್ಕಾರದ ಮನವಿಯ ಮೇರೆಗೆ ನಮ್ಮ ತಂಡವೊಂದು ಲಕ್ಷದ್ವೀಪವನ್ನು ಸುಂದರ ತಾಣವನ್ನಾಗಿ ಮಾಡುವ ಕುರಿತು ಕಾರ್ಯಕ್ರಮ ರೂಪಿಸಿತ್ತು. ಅದನ್ನೀಗ ನಾಳೆಯಿಂದಲೇ ಕಾರ್ಯಗತ ಮಾಡಲು ತಂಡ ಸಿದ್ಧವಾಗಿದೆ ಎಂದು ಬರೆದುಕೊಂಡಿದೆ.
ಲಕ್ಷದ್ವೀಪವು ಪ್ರಾಚೀನ ಮತ್ತು ಭವ್ಯ ಜಲ ಸಂಪತ್ತನ್ನು ಹೊಂದಿದೆ. ನೀವು ಅದನ್ನು ಇನ್ನೂ ವೀಕ್ಷಿಸಲು ಸಾಧ್ಯವಾಗದಿದ್ದರೆ, ಮೋಡಿ ಮಾಡುವ ದ್ವೀಪದ ಆಕರ್ಷಕವಾದ ಕೆಲವು ಚಿತ್ರಗಳು ಇಲ್ಲಿವೆ ನೋಡಿ ಎಂದು ಪ್ರಕೃತಿ ಮತ್ತು ಜಲ ಸೊಬಗಿನ ಚಿತ್ರಗಳನ್ನೂ ಹಂಚಿಕೊಂಡಿದೆ. ಅಲ್ಲಿನ ಮೆಜೆಸ್ಟಿಕ್ ಬೀಚ್‌ನ ವಿಡಿಯೋವೊಂದನ್ನು ಸಹ ಶೇರ್ ಮಾಡಿದೆ.
ವಿವಾದದಲ್ಲಿ ಇಸ್ರೇಲ್ ನುಸುಳಿದ್ದೇಕೆ?:ಇಸ್ರೇಲ್ ಮತ್ತು ಗಾಜಾ ಯುದ್ಧದಲ್ಲಿ ಭಾರತ ಸರ್ಕಾರ ಇಸ್ರೇಲ್ಗೆ ಬೆಂಬಲ ನೀಡಿದೆ. ಲಕ್ಷದ್ವೀಪದ ವಿಚಾರವಾಗಿ ಟೀಕಿಸಿರುವ ಮಾಲ್ಡೀವ್ಸ್ ಸಚಿವರೊಬ್ಬರು, ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಸರ್ಕಾರದ ಕೈಗೊಂಬೆ. ಯುದ್ಧಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದೆಲ್ಲಾ ಟೀಕಿಸಿದ್ದರು. ಇದು ಇಸ್ರೇಲ್ ಅನ್ನು ಕೆಣಕಿದ್ದು, ಭಾರತದ ಭೂಭಾಗವಾಗಿರುವ ಲಕ್ಷದ್ವೀಪವನ್ನು ವಿಶ್ವತಾಣವಾಗಿ ಮಾಡಲು ನೆರವು ನೀಡುವುದಾಗಿ ಘೋಷಿಸಿದೆ.
ಗೂಗಲ್ನಲ್ಲಿ ಸದ್ದು ಮಾಡಿದ ಲಕ್ಷದ್ವೀಪ:ಪ್ರಧಾನಿ ಮೋದಿ ಅವರು ಲಕ್ಷದ್ವೀಪದ ಬೀಚಿಗೆ ಭೇಟಿ ನೀಡಿದ ಬಳಿಕ ಗೂಗಲ್ನಲ್ಲಿ ದ್ವೀಪದ ಬಗ್ಗೆ ಹುಡುಕಾಟ ಜೋರಾಗಿದೆ. ಭಾರತೀಯ ಆನ್‌ಲೈನ್ ಟ್ರಾವೆಲ್ ಕಂಪನಿಯಾದ ಮೇಕ್ ಮೈ ಟ್ರಿಪ್ ಪ್ರಕಾರ, ಲಕ್ಷದ್ವೀಪದ ಹುಡುಕಾಟ ಶೇಕಡಾ 3,400 ರಷ್ಟು ಹೆಚ್ಚಳವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ 'ಬೀಚ್ ಆಫ್ ಇಂಡಿಯಾ' ಅಭಿಯಾನ ಟ್ರೆಂಡ್ ಆಗಿದೆ. ಬೆರಗುಗೊಳಿಸುವ ಸುಂದರ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ರಿಯಾಯಿತಿಗಳನ್ನು ನೀಡಲಾಗುವುದು ಎಂದು ತಿಳಿಸಿದೆ.
ಏನಿದು ವಿವಾದ:ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪದ ಬೀಚ್ವೊಂದಕ್ಕೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಬಣ್ಣಿಸಿ ಕೆಲ ಚಿತ್ರ, ವಿಡಿಯೋವನ್ನು ಹಂಚಿಕೊಂಡಿದ್ದರು. ಸುಂದರ ಲಕ್ಷದ್ವೀಪವು ಮಾಲ್ಡೀವ್ಸ್ಗಿಂತಲೂ ಅದ್ಭುತವಾಗಿದೆ ಎಂಬ ಭಾವನೆ ಮೂಡಿಸಿದ್ದರು. ಇದರ ವಿರುದ್ಧ ಮಾಲ್ಡೀವ್ಸ್ನ ಮೂವರು ಸಚಿವರು ಖಾರವಾಗಿ ಟೀಕಿಸಿದ್ದರು. ವಿವಾದಿತ ಹೇಳಿಕೆಯಿಂದಾಗಿ ಆ ಸಚಿವರನ್ನು ಅಲ್ಲಿನ ಸರ್ಕಾರ ಅಮಾನತು ಮಾಡಿದೆ. ಸ್ಥಳೀಯ ನಾಗರಿಕರು ಸೇರಿದಂತೆ ಸರ್ಕಾರ ಕೂಡ ಇದನ್ನು ಖಂಡಿಸಿದೆ.
ಇದನ್ನೂ ಓದಿ:ಉಡುಪಿ ಸೇರಿದಂತೆ ನಮ್ಮಲ್ಲೂ ಅದ್ಭುತ ಬೀಚ್‌ಗಳಿವೆ: ಮಾಲ್ಡೀವ್ಸ್‌ಗೆ ಕ್ರಿಕೆಟಿಗರ ಟಾಂಗ್