ಧರ್ಮಶಾಲಾ (ಹಿಮಾಚಲ ಪ್ರದೇಶ):ಕಳೆದ ನಾಲ್ಕು ದಿನಗಳಿಂದ ಪ್ಯಾಲೆಸ್ಟೀನ್ನ ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆಯ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಭಾರತದಲ್ಲಿ ನೆಲೆಸಿರುವ ಇಸ್ರೇಲ್ ಪ್ರಜೆಗಳು ಇತ್ತೀಚೆಗೆ ತಮ್ಮ ತವರಿಗೆ ಮರಳಿರುವ ಕುಟುಂಬಸ್ಥರ ಬಗ್ಗೆ ಚಿಂತಿತರಾಗಿದ್ದಾರೆ. ಇದೇ ವೇಳೆ, ಮತ್ತೆ ಕೆಲವರು ತಮ್ಮ ರಾಷ್ಟ್ರದ ಸೇನೆಯಲ್ಲಿ ಕೆಲಸ ಮಾಡುವ ಉದ್ದೇಶದಿಂದ ವಿಮಾನ ಹತ್ತಲು ಸಜ್ಜಾಗುತ್ತಿದ್ದಾರೆ.
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸಾಕಷ್ಟು ಇಸ್ರೇಲ್ ನಾಗರಿಕರು ನೆಲೆಸಿದ್ದಾರೆ. ಇಲ್ಲಿನ ಧರ್ಮಕೋಟ್ ಪ್ರದೇಶವು ''ಟೆಲ್ ಅವಿವ್'' ಅಥವಾ ''ಮಿನಿ ಇಸ್ರೇಲ್'' ಎಂದೇ ಹೆಸರು ಪಡೆದಿದೆ. ಆದರೆ, ಯುದ್ಧ ಪ್ರಾರಂಭವಾದಾಗಿನಿಂದ ಇಲ್ಲಿ ನೆಲೆಸಿರುವ ಪ್ರಜೆಗಳಲ್ಲೂ ಕತ್ತಲು ಆವರಿಸಿದೆ. ಅನೇಕರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಏಕೆಂದರೆ, ಇಲ್ಲಿ ನೆಲೆಸಿರುವ ಇಸ್ರೇಲಿಗಳು ತವರಿಗೆ ಹಿಂದಿರುಗಿದ ತಮ್ಮ ಕುಟುಂಬಸ್ಥರು ಮತ್ತು ಸಂಬಂಧಿಕರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮತ್ತೊಂದೆಡೆ, ಇಸ್ರೇಲ್ ಸರ್ಕಾರ ತನ್ನ ಮೀಸಲು ಸೈನಿಕರನ್ನು ಸೇನೆಗೆ ಮರಳುವಂತೆ ಕರೆ ನೀಡಿದೆ. ಹೀಗಾಗಿ ಅನೇಕ ನಾಗರಿಕರು ಸೇನೆಗೆ ಸೇರಲು ತಮ್ಮ ತಾಯ್ನಾಡಿಗೆ ಮರಳುತ್ತಿದ್ದಾರೆ. ಹಲವರು ಈಗಾಗಲೇ ಮನೆಗೆ ಮರಳಿದ್ದರೆ, ಕೆಲವರು ದೆಹಲಿಗೆ ತೆರಳುತ್ತಿದ್ದಾರೆ. ಇಸ್ರೇಲ್ ಪ್ರಜೆ ರೋಯ್, ''ತಮ್ಮ ದೇಶದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಎಲ್ಲರೂ ತುಂಬಾ ಚಿಂತೆಗೊಳಗಾಗಿದ್ದಾರೆ'' ಎಂದು ತಿಳಿಸಿದ್ದಾರೆ. ಅಲ್ಲದೇ, ''ನಮ್ಮಲ್ಲಿ ಅನೇಕರು ಮನೆಗೆ ಮರಳಲು ನಿರ್ಧರಿಸಿದ್ದಾರೆ. ಕೆಲವರು ಸೇನೆಗೆ ಸೇರಲು ನಿರ್ಧರಿಸಿದ್ದಾರೆ. ಆದ್ದರಿಂದ ನೂರಾರು ಇಸ್ರೇಲಿಗಳು ಈಗಾಗಲೇ ತವರಿಗೆ ಹಿಂತಿರುಗುತ್ತಿದ್ದಾರೆ'' ಎಂದು ಮಾಹಿತಿ ನೀಡಿದರು.