ಹೈದರಾಬಾದ್ (ತೆಲಂಗಾಣ): ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ನ ಹಮಾಸ್ ನಡುವೆ ಸಂಘರ್ಷ ಮುಂದುವರೆದಿದೆ. ಜನತೆ ತಮ್ಮ ಪ್ರಾಣ ರಕ್ಷಣೆಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ಇಸ್ರೇಲ್ನಲ್ಲಿ ಕೇರ್ಗಿವರ್ (ಹಿರಿಯರ ಆರೈಕೆ) ಆಗಿ ಕೆಲಸ ಮಾಡುತ್ತಿರುವ ಕೇರಳದ ಇಬ್ಬರು ಮಹಿಳೆಯರು ಹಮಾಸ್ ದಾಳಿಕೋರರಿಂದ ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ. ಇವರ ಸಾಹಸದ ಬಗ್ಗೆ ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಇತ್ತೀಚೆಗೆ ಗಾಜಾ ಗಡಿಯಲ್ಲಿನ ಕಿಬ್ಬುತ್ಸ್‌ನ ನಿರ್ ಓಜ್ ಪ್ರದೇಶದಲ್ಲಿ ಹಮಾಸ್ ದಾಳಿ ಮಾಡಿತ್ತು. ಇದೇ ಸಮಯದಲ್ಲಿ ಕೇರಳದ ಸಬಿತಾ ಮತ್ತು ಮೀರಾ ಮೋಹನನ್ ತಮ್ಮ ಕರ್ತವ್ಯದಲ್ಲಿದ್ದರು. ಈ ವೇಳೆ, ಇವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹಮಾಸ್ ದಾಳಿಯಿಂದ ವೃದ್ಧೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರ ಧೈರ್ಯವನ್ನು ಶ್ಲಾಘಿಸಿರುವ ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ, ಸಾಮಾಜಿಕ ಜಾಲತಾಣದಲ್ಲಿ 'ಎಕ್ಸ್' ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ.
''ಕೇರಳದ ಕೇರ್ಗಿವರ್ ಸಬಿತಾ ಅವರ ಈ ಕಥೆಯನ್ನು ಆಲಿಸಿ. ಅವರು ಮತ್ತು ಮೀರಾ ಮೋಹನನ್ ಅವರು ಇಸ್ರೇಲಿ ನಾಗರಿಕರನ್ನು ರಕ್ಷಿಸಿದ್ದಾರೆ. ಬಾಗಿಲಿನ ಹ್ಯಾಂಡಲ್ ಹಿಡಿದುಕೊಂಡು ಹಾಗೂ ಹಮಾಸ್ ಉಗ್ರರು ಒಡೆದು ಕೊಲೆ ಮಾಡುವುದನ್ನು ತಡೆಯುವ ಮೂಲಕ ಇಸ್ರೇಲ್ ನಾಗರಿಕರನ್ನು ಹೇಗೆ ರಕ್ಷಿಸಿದರು ಎಂಬುದನ್ನು ಅವರೇ ಹಂಚಿಕೊಂಡಿದ್ದಾರೆ'' ಎಂದು ಇಸ್ರೇಲ್ ರಾಯಭಾರ ಕಚೇರಿ ತನ್ನ ಪೋಸ್ಟ್ನಲ್ಲಿ ತಿಳಿಸಿ, ಸಬಿತಾ ವಿಡಿಯೋ ಹೇಳಿಕೆಯನ್ನು ಹಂಚಿಕೊಂಡಿದೆ.
''ಈ ಗಡಿ ಪ್ರದೇಶದಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಾನು ಮತ್ತು ಮೀರಾ ಮೋಹನನ್ ಎಎಲ್‌ಎಸ್‌ನಿಂದ ಬಳಲುತ್ತಿರುವ ರಾಹೇಲ್ ಅವರ ಆರೈಕೆಯಲ್ಲಿ ತೊಡಗಿದ್ದೇವೆ. ಆ ದಿನ (ಅಕ್ಟೋಬರ್ 7) ನಾನು ರಾತ್ರಿ ಡ್ಯೂಟಿಯಲ್ಲಿದ್ದೆ. ಬೆಳಗ್ಗೆ 6.30ಕ್ಕೆ ಹೊರಡಬೇಕಿತ್ತು. ಅದೇ ಸಮಯದಲ್ಲಿ ಸೈರನ್‌ಗಳು ಮೊಳಗುವುದು ಕೇಳಿಸಿದವು. ಆಗ ನಾವು ತಕ್ಷಣವೇ ರಾಹೇಲ್ ಅವರನ್ನು ಕರೆದುಕೊಂಡು ಸುರಕ್ಷತಾ ಕೊಠಡಿಗಳಿಗೆ ಓಡಿದೆವು. ಸೈರನ್‌ಗಳು ಮೊಳಗುವುದು ನಿಲ್ಲಲಿಲ್ಲ. ಹೊರಗೆ ಏನಾಗುತ್ತಿದೆ ಎಂದು ನಮಗೆ ಗೊತ್ತಿಲ್ಲ'' ಎಂದು ಸಬಿತಾ ತಿಳಿಸಿದ್ದಾರೆ.
''ಇದೇ ಸಮಯದಲ್ಲಿ ರಾಹೇಲ್ ಮಗಳು ನಮಗೆ ಕರೆ ಮಾಡಿ ಪರಿಸ್ಥಿತಿ ಕೈ ಮೀರಿದೆ ಎಂದು ಹೇಳಿದಳು. ಅಲ್ಲದೇ, ತಕ್ಷಣವೇ ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳನ್ನು ಲಾಕ್ ಮಾಡಿ ಎಂದು ತಿಳಿಸಿದಳು. ಇದರಿಂದ ನಾವು ಕೂಡಲೇ ಬಾಗಿಲುಗಳು ಹಾಕಿದೆವು. ಆದರೆ, ಬೆಳಗ್ಗೆ 7.30ರ ಸುಮಾರಿಗೆ ಉಗ್ರರು ಮನೆಗೆ ನುಗ್ಗಿದರು. ನಾವು ಇದ್ದ ಕೋಣೆಯ ಬಾಗಿಲು ತೆರೆಯಲು ಪ್ರಯತ್ನಿಸಿದರು. ಏನು ಮಾಡಬೇಕೆಂದು ನಮಗೆ ತಿಳಿಯಲಿಲ್ಲ. ನಾವು ಮತ್ತೆ ರಾಹೆಲ್ ಅವರ ಮಗಳಿಗೆ ಕರೆ ಮಾಡಿದೆವು. ಆಗ ಬಾಗಿಲನ್ನು ಬಿಗಿಯಾಗಿ ಹಿಡಿದುಕೊಳ್ಳಿ. ತೆರೆಯಲು ಬಿಡಬೇಡ ಎಂದು ಹೇಳಿದಳು. ನಾವೂ ಹಾಗೆಯೇ ಮಾಡಿದೆವು. ಜಾರದಂತೆ ನೋಡಿಕೊಳ್ಳಲು ಕಾಲಿನ ಚಪ್ಪಲಿ ತೆಗೆದೆವು. ಆದರೆ, ಉಗ್ರರು ನಮ್ಮ ಕೋಣೆಯ ಬಾಗಿಲು ಒಡೆಯಲು ಪ್ರಯತ್ನಿಸುತ್ತಲೇ ಇದ್ದರು. ಬಂದೂಕಿನಿಂದಲೂ ಗುಂಡು ಹಾರಿಸಿದರು'' ಈ ಘಟನೆಯನ್ನು ವಿವರಿಸಿದ್ದಾರೆ.
''ಸುಮಾರು ನಾಲ್ಕೈದು ಗಂಟೆಗಳ ಕಾಲ ನಾವು ಬಾಗಿಲನ್ನು ಬಿಗಿಯಾಗಿ ಹಿಡಿದುಕೊಂಡಿದೆವು. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮತ್ತೆ ಗುಂಡಿನ ಸದ್ದು ಕೇಳಿಸಿತು. ಆಗ ಶೆಮುಲಿಕ್ (ಆ ಮನೆಯ ಯಜಮಾನ) ಬಂದು ಇಸ್ರೇಲ್ ಸೇನೆ ಬಂದಿದೆ ಎಂದು ತಿಳಿಸಿದರು. ಅಲ್ಲದೇ, ಅವರು ಮನೆಯಿಂದ ಹೊರ ಬಂದು ನೋಡಿದಾಗ ಎಲ್ಲವೂ ನಾಶವಾಗಿತ್ತು. ಮನೆಯಲ್ಲಿದ್ದ ಎಲ್ಲವನ್ನೂ ಉಗ್ರರು ದೋಚಿದ್ದರು. ಮೀರಾ ಅವರ ಪಾಸ್‌ಪೋರ್ಟ್ ಮತ್ತು ನನ್ನ ಬ್ಯಾಗ್ ಸಹ ತೆಗೆದುಕೊಂಡು ಹೋಗಿದ್ದಾರೆ. ಕ್ಷಿಪಣಿಗಳು ಬಿದ್ದಾಗ ಸುರಕ್ಷತಾ ಕೊಠಡಿಗಳಿಗೆ ಹೋಗುವುದು ಗಡಿಯಲ್ಲಿರುವ ನಮಗೆ ಅಭ್ಯಾಸವಾಗಿದೆ'' ಎಂದು ವಿಡಿಯೋದಲ್ಲಿ ಸಬಿತಾ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:Israel- Hamas conflict: ಹಮಾಸ್ ದಾಳಿಯಲ್ಲಿ ಎಪಿ ಮಾಜಿ ವಿಡಿಯೋ ಜರ್ನಲಿಸ್ಟ್, ಕುಟುಂಬದ ಸದಸ್ಯರು ಸಾವು