ನವದೆಹಲಿ:ಭಾರತವು ಯಾವುದೇ ಭೇದವಿಲ್ಲದೆ ಎಲ್ಲ ಧರ್ಮಗಳನ್ನು ಸ್ವೀಕರಿಸುವ ಸ್ಥಳವಾಗಿರುವುದರಿಂದ ಭಾರತದಲ್ಲಿ ಮುಸ್ಲಿಮರು ಶಾಂತಿ ಮತ್ತು ಸಹೋದರತೆಯಿಂದ ಬದುಕುತ್ತಿದ್ದಾರೆ. ಅವರಲ್ಲಿ ಕೆಲವೇ ಕೆಲವರು ಮಾತ್ರ ವಿದೇಶದಲ್ಲಿ ಭಯೋತ್ಪಾದಕ ಗುಂಪುಗಳನ್ನು ಸೇರಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಂಗಳವಾರ ವಿಶ್ವಾದ್ಯಂತದ ಭಯೋತ್ಪಾದಕ ಗುಂಪುಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.
ನವದೆಹಲಿಯಲ್ಲಿ ಖುಸ್ರೋ ಫೌಂಡೇಶನ್ ಮತ್ತು ಇಂಡಿಯಾ ಇಸ್ಲಾಮಿಕ್ ಕಲ್ಚರ್ ಸೆಂಟರ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ಸೌದಿ ಅರೇಬಿಯಾದ ವಿದೇಶಾಂಗ ಕಾನೂನು ಸಚಿವ ಮತ್ತು ಮುಸ್ಲಿಂ ವರ್ಲ್ಡ್ ಲೀಗ್‌ನ ಪ್ರಧಾನ ಕಾರ್ಯದರ್ಶಿ ಡಾ ಮೊಹಮ್ಮದ್ ಬಿನ್ ಅಬ್ದುಲ್ಕರೀಮ್ ಅಲ್ - ಇಸ್ಸಾ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತವು ಭಯೋತ್ಪಾದನೆಗೆ ಬಲಿಪಶುವಾಗಿದ್ದು, 2008ರ ವಿನಾಶಕಾರಿ ಘಟನೆಗೆ ಇಡೀ ಜಗತ್ತೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸರ್ವಧರ್ಮೀಯ ಏಕತೆಯ ಸಂದೇಶವನ್ನು ತಿಳಿಸುವ ಉದ್ದೇಶದಿಂದ ಡಾ ಅಬ್ದುಲ್ಕರೀಮ್ ಅಲ್ - ಇಸ್ಸಾ ಅವರು ನಾಲ್ಕು ದಿನಗಳ ಭೇಟಿಗಾಗಿ ಸೋಮವಾರ ಭಾರತಕ್ಕೆ ಭೇಟಿ ನೀಡಿದ್ದಾರೆ. ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆ ನಡೆಯುತ್ತಿರುವ ವೇಳೆಯಲ್ಲೇ ಡಾ ಅಬ್ದುಲ್ಕರೀಮ್ ಅಲ್-ಇಸ್ಸಾ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತದ ಕಾನೂನು ಆಯೋಗವು ಇತ್ತೀಚೆಗೆ ಏಕರೂಪ ನಾಗರಿಕ ಸಂಹಿತೆ (UCC) ಕುರಿತು ಹೊಸ ಚರ್ಚೆ ಪ್ರಾರಂಭಿಸಿದೆ ಮತ್ತು ಅದರ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಕೋರಿದೆ.
"ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟವು ಪೂರ್ಣ ಪ್ರಮಾಣದಲ್ಲಿ ನಿರಂತರವಾಗಿದೆ. ಭಯೋತ್ಪಾದನೆ ಮತ್ತು ಉಗ್ರವಾದವನ್ನು ಕೊನೆಗೊಳಿಸುವ ಸಲುವಾಗಿ ನಾವು ವಿದೇಶಿ ರಾಷ್ಟ್ರಗಳೊಂದಿಗೂ ಸಹಕಾರ ಮುಂದುವರಿಸುತ್ತೇವೆ. ಭಯೋತ್ಪಾದನೆಗೆ ಯಾವುದೇ ಧರ್ಮ ಅಥವಾ ಜನಾಂಗೀಯತೆ ಇಲ್ಲ. ಆದರೆ, ಯುವಕರು ಕೆಲವೊಮ್ಮೆ ದಾರಿ ತಪ್ಪುತ್ತಾರೆ." ಎಂದು ಎನ್‌ಎಸ್‌ಎ ಅಜಿತ್ ದೋವಲ್ ತಿಳಿಸಿದರು.