ಬಾಲಿವುಡ್ ನಟಿ ರಾಖಿ ಸಾವಂತ್ ತನ್ನ ಗೆಳೆಯ ಆದಿಲ್ ಖಾನ್ ಅವರನ್ನು ಮದುವೆಯಾದ ನಂತರ ತನ್ನ ಹೆಸರನ್ನು 'ರಾಖಿ ಸಾವಂತ್ ಫಾತಿಮಾ' ಎಂದು ಬದಲಾಯಿಸಿಕೊಂಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಈ ಸುದ್ದಿಗೆ ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ. ರಾಖಿ ಮತ್ತು ಆದಿಲ್ ಖಾನ್ ಅವರ ಮದುವೆಯ ಪ್ರಮಾಣಪತ್ರವು ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ರಾಖಿ ಸಾವಂತ್ ಇಸ್ಲಾಮ್ಗೆ ಮತಾಂತರವಾಗಿರುವ ಬಗ್ಗೆ ಊಹಾಪೋಹಗಳು ಹಬ್ಬಿವೆ.
ಇಸ್ಲಾಂ ಧರ್ಮದ ಬಗ್ಗೆ ಆಗಾಗ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ತಸ್ಲೀಮಾ ನಸ್ರೀನ್, ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಅವರ ಮದುವೆಯ ಬಗ್ಗೆ ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಸ್ಲಾಂ ಧರ್ಮವು ವಿಕಸನಗೊಳ್ಳಬೇಕಿದೆ ಮತ್ತು ಬೇರೊಂದು ನಂಬಿಕೆಯ ಸಂಬಂಧಗಳನ್ನು ಸ್ವೀಕರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ರಾಖಿ ತನ್ನ ಹೆಸರಿನೊಂದಿಗೆ ಫಾತಿಮಾ ಎಂದು ಸೇರಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ನಸ್ರೀನ್, ರಾಖಿ ಸಾವಂತ್ ಅವರು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ಕಾರಣ ಇಸ್ಲಾಂಗೆ ಮತಾಂತರಗೊಳ್ಳಬೇಕಾಯಿತು. ಇತರ ಧರ್ಮಗಳಂತೆ ಇಸ್ಲಾಂ ಧರ್ಮವು ವಿಕಸನಗೊಳ್ಳಬೇಕು ಮತ್ತು ಅದು ಮುಸ್ಲಿಮರು ಮತ್ತು ಮುಸ್ಲಿಮೇತರರ ನಡುವಿನ ವಿವಾಹಗಳನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ.
ಇಸ್ಲಾಂ ವಿಕಸನಗೊಳ್ಳಬೇಕು ಮತ್ತು ವಿಮರ್ಶಾತ್ಮಕ ಪರಿಶೀಲನೆ, ವಾಕ್ ಸ್ವಾತಂತ್ರ್ಯ, ಪ್ರವಾದಿಗಳ ವ್ಯಂಗ್ಯಚಿತ್ರಗಳು, ಮಹಿಳಾ ಸಮಾನತೆ, ನಾಸ್ತಿಕತೆ, ಜಾತ್ಯತೀತತೆ, ವೈಚಾರಿಕತೆ, ಮುಸ್ಲಿಮೇತರ ಹಕ್ಕುಗಳು, ಮಾನವ ಹಕ್ಕುಗಳು, ನಾಗರಿಕತೆ ಇತ್ಯಾದಿಗಳನ್ನು ಸ್ವೀಕರಿಸಬೇಕು. ಇಲ್ಲದಿದ್ದರೆ, ಆಧುನಿಕ ಸಮಾಜದಲ್ಲಿ ಅದಕ್ಕೆ ಸ್ಥಾನವಿಲ್ಲ ಎಂದು ನಸ್ರೀನ್ ಟ್ವೀಟ್ನಲ್ಲಿ ಬರೆದಿದ್ದಾರೆ. ಪ್ರವಾದಿಯ ಕುರಿತಾದ ಟ್ವೀಟ್ಗೆ ಬಂದ ಟ್ರೋಲ್ ಗೆ ಕೂಡ ನಸ್ರೀನ್ ಕಮೆಂಟ್ ಮಾಡಿದ್ದು, ಅವರಿಗೆ 6 ವರ್ಷದ ಮಗು ಮತ್ತು ಅವರ ಸೊಸೆ ಸೇರಿದಂತೆ 13 ಹೆಂಡತಿಯರಿದ್ದರು. ನೀವು ಅವರ ತತ್ವಗಳನ್ನು ಅನುಸರಿಸಲು ಬಯಸುವಿರಾ? ಎಂದು ಪ್ರಶ್ನಿಸಿದ್ದಾರೆ.