ನವದೆಹಲಿ: ಐಸಿಸ್ ಭಯೋತ್ಪಾದಕ ಸಂಘಟನೆಯ ವಿರುದ್ಧದ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಶನಿವಾರ 44 ಕಡೆಗಳಲ್ಲಿ ದಾಳಿ ಮಾಡಿ, 15 ಜನರನ್ನು ಬಂಧಿಸಿದೆ. ಬಂಧಿತ ಆರೋಪಿಗಳಲ್ಲಿ ಹೊಸ ನೇಮಕಾತಿ ಸಂದರ್ಭದಲ್ಲಿ 'ಬಯಾತ್' (ಐಸಿಸ್‌ನ ಖಲೀಫಾಗೆ ನಿಷ್ಠನಾಗಿರುವ ಪ್ರಮಾಣ) ಬೋಧಿಸುತ್ತಿದ್ದ ಐಸಿಸ್ ಜಾಲದ ಓರ್ವ ನಾಯಕ ಸಹ ಸೇರಿದ್ದಾನೆ ಎಂದು ತನಿಖಾ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಪಾದ್ಘಾ-ಬೋರಿವಲಿ, ಥಾಣೆ, ಮೀರಾ ರೋಡ್, ಪುಣೆ ಮತ್ತು ಕರ್ನಾಟಕದ ಬೆಂಗಳೂರಿನ 44 ಸ್ಥಳಗಳಲ್ಲಿ ಶನಿವಾರ ಬೆಳಗ್ಗೆ ಹಲವಾರು ಎನ್‌ಐಎ ತಂಡಗಳು ದಾಳಿ ನಡೆಸಿವೆ. ಈ ವೇಳೆ, ಭಯೋತ್ಪಾದನೆ ಮತ್ತು ಭಯೋತ್ಪಾದನೆ ಸಂಬಂಧಿತ ಕೃತ್ಯಗಳು ಮತ್ತು ನಿಷೇಧಿತ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗಿ ಹಾಗೂ ಉತ್ತೇಜಿಸಿದ ಆರೋಪದ ಮೇಲೆ 15 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೇ, ದಾಳಿಯ ವೇಳೆ ಅಪಾರ ಪ್ರಮಾಣದ ಲೆಕ್ಕಕ್ಕೆ ಸಿಗದ ನಗದು, ಬಂದೂಕು, ಹರಿತವಾದ ಆಯುಧಗಳು, ದಾಖಲೆಗಳು, ಸ್ಮಾರ್ಟ್ ಫೋನ್‌ಗಳು ಮತ್ತು ಇತರ ಡಿಜಿಟಲ್ ಸಾಧನಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಎಸ್‌ಐಎಸ್-ಐಸಿಸ್) ಹಿಂಸಾತ್ಮಕ ಭಯೋತ್ಪಾದಕ ಕೃತ್ಯಗಳು ಮತ್ತು ಅಮಾಯಕರ ಜೀವಗಳನ್ನು ತೆಗೆಯುವ ಪ್ರಯತ್ನಗಳನ್ನು ತಡೆಯುವ ಪ್ರಯತ್ನದ ಭಾಗವಾಗಿ ಎನ್‌ಐಎ ಈ ಕಾರ್ಯಾಚರಣೆ ನಡೆಸಿದೆ. ಈ ಬಂಧಿತ ಆರೋಪಿಗಳು ತಮ್ಮ ವಿದೇಶಿ ನಿರ್ವಾಹಕರ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದು, ಐಸಿಸ್‌ನ ಹಿಂಸಾತ್ಮಕ ಮತ್ತು ವಿನಾಶಕಾರಿ ಕಾರ್ಯಸೂಚಿಯನ್ನು ಹೆಚ್ಚಿಸಲು ಸುಧಾರಿತ ಸ್ಫೋಟಕ ಸಾಧನಗಳ ತಯಾರಿಕೆ ಸೇರಿದಂತೆ ವಿವಿಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ವಕ್ತಾರರು ವಿವರಿಸಿದ್ದಾರೆ.
ದೇಶದ ಶಾಂತಿ, ಕೋಮು ಸೌಹಾರ್ದತೆ ಕದಡಲು ಯತ್ನ:ಐಸಿಸ್ ಮಹಾರಾಷ್ಟ್ರ ಜಾಲದ ಈ ಎಲ್ಲ ಆರೋಪಿಗಳು ಪಾದ್ಘಾ-ಬೋರಿವಲಿಯಿಂದ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ಭಯೋತ್ಪಾದನೆ ಹರಡಲು ಮತ್ತು ಭಾರತದಾದ್ಯಂತ ಹಿಂಸಾಚಾರವನ್ನು ನಡೆಸಲು ಸಂಚು ರೂಪಿಸಿದ್ದರು ಎಂದು ತನಿಖೆಗಳು ಬಹಿರಂಗಪಡಿಸಿವೆ. ಹಿಂಸಾತ್ಮಕ ಜಿಹಾದ್ (ಪವಿತ್ರ ಯುದ್ಧ), ಖಿಲಾಫತ್, ಐಸಿಸ್ ಇತ್ಯಾದಿಗಳ ಮಾರ್ಗವನ್ನು ಅನುಸರಿಸುತ್ತಿದ್ದ ಆರೋಪಿಗಳು ದೇಶದ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವುದು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಯುದ್ಧ ನಡೆಸುವ ಗುರಿಯನ್ನು ಹೊಂದಿದ್ದರು ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಅಲ್ಲದೇ, ಬಂಧಿತ ಆರೋಪಿಗಳು ಥಾಣೆ ಗ್ರಾಮಾಂತರದಲ್ಲಿರುವ ಪಾದ್ಘಾ ಗ್ರಾಮವನ್ನು 'ವಿಮೋಚನೆಗೊಂಡ ವಲಯ' ಮತ್ತು 'ಅಲ್ ಶಾಮ್' ಎಂದು ಸ್ವಯಂ ಆಗಿ ಘೋಷಿಸಿಕೊಂಡಿದ್ದಾರೆ ಎಂಬುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ತಮ್ಮ ನೆಲೆಯನ್ನು ಬಲಪಡಿಸಲು ಮುಸ್ಲಿಂ ಯುವಕರನ್ನು ತಮ್ಮ ವಾಸಸ್ಥಳದಿಂದ ಸ್ಥಳಾಂತರವಾಗಲು ಪ್ರೇರೇಪಿಸುತ್ತಿದ್ದರು. ಪ್ರಮುಖ ಆರೋಪಿ ಮತ್ತು ಐಸಿಸ್ ಜಾಲದ ನಾಯಕ ಸಾಕಿಬ್ ನಾಚನ್ ನಿಷೇಧಿತ ಸಂಘಟನೆಗೆ ಸೇರುವ ವ್ಯಕ್ತಿಗಳಿಗೆ 'ಬಯಾತ್' ಬೋಧಿಸುತ್ತಿದ್ದ. ದೇಶದ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಐಸಿಸ್ ಘಟಕಗಳು ಮತ್ತು ಸೆಲ್‌ಗಳನ್ನು ಇರಿಸುವ ಮೂಲಕ ಐಸಿಸ್ ಭಾರತದಲ್ಲಿ ತನ್ನ ಭಯೋತ್ಪಾದಕ ಜಾಲವನ್ನು ಹರಡುತ್ತಿದೆ ಎಂದು ವಕ್ತಾರರು ಬಹಿರಂಗ ಪಡಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಐಸಿಸ್ ಮಹಾರಾಷ್ಟ್ರ ಜಾಲದ ವಿರುದ್ಧ ತನಿಖಾ ಸಂಸ್ಥೆ ಪ್ರಕರಣ ದಾಖಲಿಸಿದೆ. ಅಂದಿನಿಂದ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಿವಿಧ ಐಸಿಸ್ ಮಾಡ್ಯೂಲ್‌ಗಳು ಮತ್ತು ನೆಟ್‌ವರ್ಕ್‌ಗಳನ್ನು ತೊಡೆದು ಹಾಕಲು ಸಂಘಟಿತ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚಿನ ತಿಂಗಳುಗಳಲ್ಲಿ ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿದೆ.
ಇದನ್ನೂ ಓದಿ:ಒಡಿಶಾ ಮದ್ಯ ತಯಾರಿಕಾ ಕಂಪನಿಯಲ್ಲಿ ಮುಂದುವರೆದ ಐಟಿ ಶೋಧ: 46 ಕೋಟಿ ಮೌಲ್ಯದ ನೋಟು ಎಣಿಕೆ ಪೂರ್ಣ