ಹೈದರಾಬಾದ್: ಒಂದು ಕಾಲದಲ್ಲಿ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದ ಮ್ಯಾನೇಜ್‌ಮೆಂಟ್ ಶಿಕ್ಷಣವನ್ನು ಪಡೆಯಲು ವಾರ್ಟನ್, ಬೂತ್, ಕೆಲ್ಲಾಗ್ ಮತ್ತು ಲಂಡನ್ ಸ್ಕೂಲ್ ಆಫ್ ಬ್ಯುಸಿನೆಸ್ನಂತಹ ವಿದೇಶಿ ಶಿಕ್ಷಣ ಸಂಸ್ಥೆಗಳಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ ಎರಡು ದಶಕಗಳ ಹಿಂದೆ ಹೈದರಾಬಾದ್ನಲ್ಲಿ ಸ್ಥಾಪಿತವಾದ ಐಎಸ್‌ಬಿ ಶಿಕ್ಷಣ ಸಂಸ್ಥೆ ಆ ಸಮಸ್ಯೆ ನಿವಾರಿಸಿತು.
ಈ ಸಂಸ್ಥೆಯು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ದೇಶಕ್ಕೆ ಹೆಮ್ಮೆ ತಂದುಕೊಟ್ಟಿದೆ. 2022ರ ಎಫ್ಟಿ ಗ್ಲೋಬಲ್ ಎಂಬಿಎ ರ್ಯಾಂಕಿಂಗ್ನಲ್ಲಿ ಐಎಸ್‌ಬಿ 32ನೇ ಸ್ಥಾನ ಪಡೆದಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ನಮ್ಮ ದೇಶದಲ್ಲಿ ಹಲವು ವರ್ಷಗಳಿಂದ ಉನ್ನತ ನಿರ್ವಹಣಾ ಶಿಕ್ಷಣ ನೀಡುತ್ತಿದೆ. ಆದರೆ ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯುನ್ನತ ಗುಣಮಟ್ಟದಲ್ಲಿ ದೇಶಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟ ಗೌರವ ಐಎಸ್‌ಬಿಗೆ ಸಲ್ಲುತ್ತದೆ.
ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಇಂತಹದ್ದೊಂದು ಸಂಸ್ಥೆ ಹೈದರಾಬಾದ್ನಲ್ಲಿ ಸ್ಥಾಪನೆಗೊಳ್ಳಲು ಕಾರಣಕರ್ತರು. ರಜತ್ ಗುಪ್ತಾ ಮತ್ತು ಕಂಪನಿಯ ಮುಖ್ಯಸ್ಥ ಮೆಕಿನ್ಸೆ ಅವರು ನಮ್ಮ ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ನಿರ್ವಹಣಾ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಆಲೋಚನೆ ಹೊಂದಿದ್ದರು. ಕಾರ್ಪೊರೇಟ್ ಉದ್ಯಮಿಗಳಾದ ರಾಹುಲ್ ಬಜಾಜ್, ಆದಿ ಗೋದ್ರೇಜ್ ಮತ್ತು ಅಂಬಾನಿ ಅವರು ಈ ಕಲ್ಪನೆಯನ್ನು ಬೆಂಬಲಿಸಿದ್ದರು. ನಂತರ 1997ರಲ್ಲಿ ಐಎಸ್‌ಬಿ ಆಡಳಿತ ಮಂಡಳಿಯನ್ನು ರಚಿಸಲಾಗಿತ್ತು.
ಈ ಶಿಕ್ಷಣ ಸಂಸ್ಥೆಯನ್ನು ಎಲ್ಲಿ ಸ್ಥಾಪಿಸುವುದು ಎಂಬ ಪ್ರಶ್ನೆ ಉದ್ಭವಿಸಿದಾಗ ಆಡಳಿತ ಮಂಡಳಿ ಸಹಜವಾಗಿಯೇ ದೇಶದ ಆರ್ಥಿಕ ರಾಜಧಾನಿ ಮುಂಬೈಗೆ ಒಲವು ತೋರಿಸಿದೆ. ಆದರೆ ಕೆಲವೊಂದು ರಾಜ್ಯಗಳು ನಮ್ಮಲ್ಲಿ ಸ್ಥಾಪಿಸುವಂತೆ ಮನವಿ ಸಲ್ಲಿಸುತ್ತಿದ್ದವು. ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ರಾಜ್ಯಗಳ ನಡುವೆ ಈ ವಿಷಯವಾಗಿ ಪೈಪೋಟಿಯೇ ನಡೆದಿತ್ತು. ಬಳಿಕ ಚಂದ್ರಬಾಬು ನಾಯ್ಡು ಅವರು ಇದರ ಜವಾಬ್ದಾರಿ ತೆಗೆದುಕೊಂಡು ಆಡಳಿತ ಮಂಡಳಿಯನ್ನು ಸ್ವತಃ ತಾವೇ ಆಹ್ವಾನಿಸಿ ಹೈದರಾಬಾದ್ನಲ್ಲಿ ಐಎಸ್‌ಬಿ ಸ್ಥಾಪಿಸುವಂತೆ ಕೇಳಿಕೊಂಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಆಡಳಿತ ಮಂಡಳಿಯು ಸಮ್ಮತಿ ನೀಡಿತ್ತು.
1999ರ ಡಿಸೆಂಬರ್ 20ರಂದು ಕಟ್ಟಡ ನಿರ್ಮಾಣಕ್ಕೆ ಚಂದ್ರಬಾಬು ನಾಯ್ಡು ಶಂಕುಸ್ಥಾಪನೆ ಮಾಡಿದ್ದರು. 2001ರ ಡಿಸೆಂಬರ್ 2 ರಂದು ಆಗಿನ ಪ್ರಧಾನಿ ವಾಜಪೇಯಿ ಅವರು ಐಎಸ್‌ಬಿಗೆ ಚಾಲನೆಯಿತ್ತರು. 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು.
ಸಾಕಷ್ಟು ಅಭಿವೃದ್ಧಿ ಹೊಂದಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ಹಲವಾರು ಕೋರ್ಸ್ಗಳಿವೆ. 2 ರಿಂದ 25 ವರ್ಷಗಳ ಅನುಭವ ಹೊಂದಿರುವ ವೃತ್ತಿಪರರಿಗೆ ಒಂದು ವರ್ಷದ ಪಿಜಿಪಿ ತರಬೇತಿ, 10-25 ವರ್ಷಗಳ ಅನುಭವ ಹೊಂದಿರುವ ಹಿರಿಯ ಕಾರ್ಯನಿರ್ವಾಹಕರಿಗೆ 15 ತಿಂಗಳ ಪಿಜಿಪಿ ಮ್ಯಾಕ್ಸ್ ಸ್ನಾತಕೋತ್ತರ ಕಾರ್ಯಕ್ರಮ, 5 ಕ್ಕಿಂತ ಹೆಚ್ಚು ವರ್ಷ ಅನುಭವದೊಂದಿಗೆ ಕೆಲಸ ಮಾಡುವ ವೃತ್ತಿಪರರಿಗೆ 18 ತಿಂಗಳ ಪಿಜಿಪಿ ಪ್ರೊ ತರಬೇತಿ ಮತ್ತು ಕುಟುಂಬ ವ್ಯವಹಾರಗಳಲ್ಲಿ 0-5 ವರ್ಷಗಳ ಅನುಭವ ಹೊಂದಿರುವವರಿಗೆ 15 ತಿಂಗಳ ಪಿಜಿಪಿ ಎಂಎಫ್ಎಬಿ ತರಬೇತಿಯನ್ನು ನೀಡಲಾಗುತ್ತಿದೆ.
ಇದನ್ನೂ ಓದಿ:ರಾಮೋಜಿ ಫಿಲ್ಮ್ ಸಿಟಿಯಲ್ಲಿ ವಿಂಟರ್ ಫೆಸ್ಟ್! ಪ್ರವಾಸಿಗರಿಗೆ ಅವಿಸ್ಮರಣೀಯ ಅನುಭವ