ವಯನಾಡ್ (ಕೇರಳ):ಕೇರಳದ ವಯನಾಡ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಉಪನಾಮ ಹೇಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಬಳಿಕ ಸಂಸದ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ರಾಹುಲ್ ಅವರಿಂದ ತೆರವಾಗಿರುವ ಆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ಸಾಧ್ಯತೆಯಿದೆ.
ಬುಧವಾರ ಕೋಯಿಕ್ಕೋಡ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಆಯೋಗದಿಂದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಅಣಕು ಮತದಾನ ನಡೆದಿದ್ದು, ಉಪಚುನಾವಣೆ ನಡೆಯುವ ಸಾಧ್ಯತೆಯ ಕುರಿತು ಊಹಾಪೋಹಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಗುಜರಾತ್‌ನ ನ್ಯಾಯಾಲಯ ಕ್ರಿಮಿನಲ್ ಮಾನಹಾನಿ ಕೇಸ್ನಲ್ಲಿ 2 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿದೆ. ಕ್ರಿಮಿನಲ್ ಕೇಸ್ನಲ್ಲಿ ಶಿಕ್ಷಿತರಾಗಿರುವ ರಾಹುಲ್ರ ಸಂಸದ ಸ್ಥಾನವನ್ನು ಅನರ್ಹಗೊಳಿಸಿ ಲೋಕಸಭೆಯ ಕಾರ್ಯದರ್ಶಿ ಆದೇಶಿಸಿದ್ದರು. ಕಾಂಗ್ರೆಸ್ ನಾಯಕ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣ ಕೋರ್ಟ್ನಲ್ಲಿರುವಾಗಲೇ ಈ ಅಣಕು ಮತದಾನ ನಡೆದಿದೆ.
ಕಾಂಗ್ರೆಸ್ ಆಕ್ಷೇಪ:ವಯನಾಡ್ ಲೋಕಸಭೆ ಕ್ಷೇತ್ರಕ್ಕೆ ಅಣಕು ಮತದಾನಕ್ಕಾಗಿ ಕಾಂಗ್ರೆಸ್ ಸೇರಿದಂತೆ ಎಲ್ಲ ನಾಯಕರಿಗೆ ಜಿಲ್ಲಾಡಳಿತ ಪತ್ರ ರವಾನಿಸಿದೆ. ಜಿಲ್ಲಾಧಿಕಾರಿ ಸೇರಿದಂತೆ ಕೆಲ ನಾಯಕರು ಮತದಾನ ಮಾಡಿದ್ದಾರೆ. ರಾಹುಲ್ ಗಾಂಧಿ ಪ್ರಕರಣ ಕೋರ್ಟ್ ಮುಂದೆ ವಿಚಾಣೆಯಲ್ಲಿರುವಾಗಲೇ ಚುನಾವಣೆಗೆ ಸಿದ್ಧತೆ ನಡೆಸಿದ್ದಕ್ಕೆ ಕಾಂಗ್ರೆಸ್ ಆಕ್ಷೇಪಿಸಿದೆ.
ಈ ಅಣಕು ಮತದಾನ ಎಲ್ಲವೂ ನಿಗೂಢವಾಗಿದೆ. ಬುಧವಾರ ಅಣಕು ಮತದಾನ ನಡೆದಿದೆ. ಅದಕ್ಕಾಗಿ ಪಕ್ಷದ ನಾಯಕರನ್ನು ನಾಮನಿರ್ದೇಶನ ಮಾಡಬೇಕು ಎಂದು ಕೋಯಿಕ್ಕೋಡ್ ಜಿಲ್ಲಾಧಿಕಾರಿಗಳಿಂದ ನಮಗೆ ಪತ್ರ ಬಂದಿದೆ. ನಾನು ಅಲ್ಲಿಗೆ ತಲುಪಿದಾಗ ಐಯುಎಂಎಲ್‌ನ ಪಕ್ಷದ ನಾಯಕರೂ ಇದ್ದರು. ಅಣಕು ಮತದಾನದ ಸಭೆಯನ್ನು ಜಿಲ್ಲಾಧಿಕಾರಿ ಉದ್ಘಾಟಿಸಿ, ಮತ ಕೂಡ ಚಲಾಯಿಸಿದರು. ಎಲ್ಲ ಇವಿಎಂ, ವಿವಿಪ್ಯಾಟ್ ಯಂತ್ರಗಳನ್ನು ಪರಿಶೀಲಿಸುವುದಾಗಿ ಹೇಳಿದ್ದೆವು. ರಾಹುಲ್ ಗಾಂಧಿಯವರ ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ. ಹೀಗಾಗಿ ಚುನಾವಣೆ ಸಿದ್ಧತೆ ಸರಿಯೇ ಎಂದು ವಯನಾಡ್‌ನ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಪ್ರಶ್ನಿಸಿದ್ದಾರೆ.