ನವದೆಹಲಿ:ತಜ್ಞರು ಹೇಳುವಂತೆ ಹಿಂದಿನ ಕೋವಿಡ್ ರೂಪಾಂತರಗಳಿಗಿಂತ ಡೆಲ್ಟಾ ರೂಪಾಂತರವು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎನ್ನುವುದಕ್ಕೆ ಇನ್ನೂ ಯಾವುದೇ ಬಲವಾದ ಪುರಾವೆಗಳಿಲ್ಲ. ಆದರೆ ಡೆಲ್ಟಾ ಹೆಚ್ಚು ಬಲಿಷ್ಠವಾಗಿದ್ದು, ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸುಲಭವಾಗಿ ಸೋಂಕು ಹರಡಲು ಕಾರಣವಾಗಿದೆ.
ಹೀಗಾಗಿ ಇದು, ಶಾಲೆಗಳಲ್ಲಿ ಮಾಸ್ಕ್ಗಳು ಮತ್ತು ಹೆಚ್ಚು ವಯಸ್ಸಾದವರಿಗೆ ಕೋವಿಡ್ ಲಸಿಕೆಗಳ ಅಗತ್ಯವನ್ನು ಒತ್ತಿ ಹೇಳುತ್ತದೆ ಎಂದು ಫ್ಲೋರಿಡಾದ ಸೇಂಟ್‌ನ ಜಾನ್ಸ್ ಹಾಪ್ಕಿನ್ಸ್ ಮಕ್ಕಳ ಆಸ್ಪತ್ರೆಯ ಸಾಂಕ್ರಾಮಿಕ ರೋಗ ತಜ್ಞ ಡಾ. ಜುವಾನ್ ಡುಮೋಯಿಸ್ ಹೇಳಿದ್ದಾರೆ.
ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಮತ್ತು ಚಿಲ್ಡ್ರನ್ಸ್ ಹಾಸ್ಪಿಟಲ್ ಅಸೋಸಿಯೇಶನ್‌ನ ಮಾಹಿತಿಯ ಪ್ರಕಾರ, ಯುಎಸ್ನಲ್ಲಿ ಸಾಂಕ್ರಾಮಿಕ ಆರಂಭದಿಂದ ಇಲ್ಲಿಯವರೆಗೆ 5 ಮಿಲಿಯನ್ ಮಕ್ಕಳು ಕೊರೊನಾ ವೈರಸ್ಗೆ ಒಳಗಾಗಿದ್ದಾರೆ. ಆದರೆ ಕಳೆದ ನಾಲ್ಕು ವಾರಗಳಲ್ಲಿ ಡೆಲ್ಟಾ ರೂಪಾಂತರದ ಪರಿಣಾಮವಾಗಿ ಒಂದು ಮಿಲುಯನ್ಗಿಂತಲೂ ಹೆಚ್ಚು ಮಕ್ಕಳು ಸೋಂಕಿಗೆ ತುತ್ತಾಗಿದ್ದಾರೆ.
ಇದನ್ನೂ ಓದಿ: ಕೊಡಗಿನಲ್ಲಿ ಡೆಲ್ಟಾ ಹಾವಳಿ: 19 ಹೊಸ ಕೋವಿಡ್ ಡೆಲ್ಟಾ ವೇರಿಯಂಟ್ ಪ್ರಕರಣಗಳು ಪತ್ತೆ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈವರೆಗೆ ಒಟ್ಟು 180ಕ್ಕೂ ಹೆಚ್ಚು ದೇಶಗಳಲ್ಲಿ ಡೆಲ್ಟಾ ರೂಪಾಂತರವನ್ನು ಪತ್ತೆ ಮಾಡಲಾಗಿದೆ. ಈ ಪೈಕಿ ಚಿಕ್ಕ ಮಕ್ಕಳು ಮತ್ತು ಹದಿಹರೆಯದವರೇ ಹೆಚ್ಚು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಡೆಲ್ಟಾ ರೂಪಾಂತರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೋಂಕಿಗೆ ಒಳಗಾಗುತ್ತಿದ್ದಾರಾದರೂ, ಅವರು ಸೌಮ್ಯ ಲಕ್ಷಣಗಳನ್ನು ಹೊಂದಿದ್ದಾರೆ ಮತ್ತು ಎಲ್ಲರೂ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆಯಿಲ್ಲ ಎಂದು ತಜ್ಞರು ಹೇಳುತ್ತಾರೆ.