ನವದೆಹಲಿ: ಐಸಿಸ್ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಂದು ಕರ್ನಾಟಕ ಸೇರಿ ಆರು ರಾಜ್ಯಗಳ 13 ಸ್ಥಳಗಳಲ್ಲಿ ದಾಳಿ ಮಾಡಿ, ಶಂಕಿತರಿಗಾಗಿ ಶೋಧ ನಡೆಸಿದೆ.
ಕರ್ನಾಟಕದ ಭಟ್ಕಳ ಮತ್ತು ತುಮಕೂರು ನಗರ, ಮಧ್ಯಪ್ರದೇಶದ ಭೋಪಾಲ್ ಮತ್ತು ರೈಸನ್, ಗುಜರಾತ್‌ನ ಭರೂಚ್, ಸೂರತ್, ನವಸಾರಿ ಮತ್ತು ಅಹಮದಾಬಾದ್, ಬಿಹಾರದ ಅರಾರಿಯಾ ಜಿಲ್ಲೆ, ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ನಾಂದೇಡ್ ಜಿಲ್ಲೆ ಮತ್ತು ಉತ್ತರ ಪ್ರದೇಶದ ದೇವಬಂದ್ ಜಿಲ್ಲೆಯಲ್ಲಿ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಕರ್ನಾಟಕದ ಭಟ್ಕಳದಲ್ಲಿ ವ್ಯಕ್ತಿಯೋರ್ವನನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ತಿಳಿದುಬಂದಿದೆ. ಇತ್ತ, ಮಧ್ಯಪ್ರದೇಶದ ಭೋಪಾಲ್ನಲ್ಲೂ ಓರ್ವ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಮೂರ್ನಾಲ್ಕು ಜನರನ್ನೂ ವಿಚಾರಣೆಗೊಳಪಡಿಸಲಾಗಿದೆ. ಜೊತೆಗೆ ಗುಜರಾತ್‌ನ ಸೂರತ್ನಲ್ಲೂ ಓರ್ವ ಯುವಕನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಜೂನ್ 25ರಂದು ಐಪಿಸಿ ಸೆಕ್ಷನ್ 153 ಎ ಮತ್ತು 153 ಬಿ ಮತ್ತು ಯುಎ (ಪಿ) ಕಾಯ್ದೆಯ ಸೆಕ್ಷನ್ 18, 18 ಬಿ, 38, 39 ಮತ್ತು 40ರ ಅಡಿಯಲ್ಲಿ ಎನ್‌ಐಎ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಇಂದು ನಡೆಸಲಾದ ದಾಳಿ ಮತ್ತು ಶೋಧ ಕಾರ್ಯವು ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲು ಸಹಕಾರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.