ಕರ್ನಾಟಕ

karnataka

ETV Bharat / bharat

ವಿಶೇಷ ಲೇಖನ: ಚುನಾವಣಾ ಆಯೋಗದ ವಿಶ್ವಾಸಾರ್ಹತೆಗೆ ಧಕ್ಕೆ? - ನೀತಿ ಸಂಹಿತೆ

ತಮಿಳುನಾಡು, ಪುದುಚೇರಿ, ಕೇರಳ ಹಾಗೂ ಅಸ್ಸಾಂನಲ್ಲಿ ಏಪ್ರಿಲ್ 6ನೇ ತಾರೀಕಿನಂದು ಮತದಾನ ಪೂರ್ಣಗೊಂಡಿದ್ದರೆ, ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್‌ 29ರ ತನಕ ಇನ್ನೂ ನಾಲ್ಕು ಹಂತಗಳಲ್ಲಿ ಚುನಾವಣೆ ಮುಂದುವರೆಯಲಿದೆ. ಇದು ರಾಜಕೀಯವಾಗಿ ಭಾರೀ ಬೆಲೆ ತೆರಬೇಕಾದಂತಹ ವಾತಾವರಣಕ್ಕೆ ಕಾರಣವಾಗಿದೆ.

Election Commission
Election Commission

By

Published : Apr 15, 2021, 7:41 AM IST

'ಚುನಾವಣೆಯಲ್ಲಿ ಅಡ್ಡ ಹಾದಿ ಹಿಡಿದು ಗೆಲುವು ಸಾಧಿಸುವುದು ಯಾವುದೇ ಕಾರಣಕ್ಕೂ ಗೆಲುವಲ್ಲ' ಎಂದು ದೇಶದ ಪ್ರಥಮ ಪ್ರಧಾನ ಮಂತ್ರಿ ಜವಾಹರ್‌ ಲಾಲ್‌ ನೆಹರು ಅವರು ಸ್ಪಷ್ಟವಾಗಿ ಹೇಳಿದ್ದ ಮಾತನ್ನು ಇಂದು ಒಪ್ಪುವವರು ಯಾರೂ ಇಲ್ಲ. ಕಾನೂನಿನ ಮೂಲಕ ಅಸ್ತಿತ್ವದಲ್ಲಿ ಇರುವ ನಿಯಮಗಳನ್ನು ಬುಡಮೇಲು ಮಾಡಲು ರಾಜಕೀಯ ಪಕ್ಷಗಳು ಪೈಪೋಟಿ ನಡೆಸುತ್ತ ಬಂದಿರುವುದರಿಂದ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಭಾರಿ ಹೊಡೆತ ಬಿದ್ದು ಅದು ಸಾಕಷ್ಟು ನರಳುತ್ತಿದೆ.

ಹೌದು, ತಮಿಳುನಾಡು, ಪುದುಚೇರಿ, ಕೇರಳ ಹಾಗೂ ಅಸ್ಸಾಂನಲ್ಲಿ ಏಪ್ರಿಲ್ ಆರನೇ ತಾರೀಕಿನಂದು ಮತದಾನ ಪೂರ್ಣಗೊಂಡಿದ್ದರೆ, ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್‌ 29ರ ತನಕ ಇನ್ನೂ ನಾಲ್ಕು ಹಂತಗಳಲ್ಲಿ ಚುನಾವಣೆ ಮುಂದುವರೆಯಲಿದೆ. ಇದು ರಾಜಕೀಯವಾಗಿ ಭಾರೀ ಬೆಲೆ ತೆರಬೇಕಾದಂತಹ ವಾತಾವರಣಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ 6,400 ಮತಗಟ್ಟೆ ಕೇಂದ್ರಗಳನ್ನು ಸಮಸ್ಯಾತ್ಮಕ ಎಂದು ಗುರುತಿಸಲಾಗಿದ್ದು, ಎಂಟು ಹಂತಗಳ ಚುನಾವಣೆ ವೇಳೆ ಅವುಗಳ ಮೇಲೆ ನಿಗಾ ಇಡಲೆಂದು ಕೇಂದ್ರ ಪಡೆಗಳನ್ನು ಹೆಚ್ಚು ಹೆಚ್ಚಾಗಿ ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗ ಹೆಮ್ಮೆಯಿಂದ ಹೇಳಿಕೊಂಡಿತ್ತು. ಆದರೂ ನೀತಿ ಸಂಹಿತೆಯನ್ನು ನಿಸ್ಪಕ್ಷಪಾತವಾಗಿ ಜಾರಿಗೆ ತರುವ ಕುರಿತಂತೆ ಅದರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಿದೆ.

2016ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ 18 ಲೋಕಸಭಾ ಸ್ಥಾನಗಳನ್ನು ಗೆದ್ದಾಗ ಪಕ್ಷದ ಬಲ ಹೆಚ್ಚಿತು. ಈಗ ತೃಣಮೂಲ ಕಾಂಗ್ರೆಸ್‌ ಸರ್ಕಾರವನ್ನು ರಾಜ್ಯದಿಂದ ತೊಡೆದು ಹಾಕಲು ಅದು ಉತ್ಸುಕವಾಗಿದೆ. ಸವಾಲನ್ನು ಒಪ್ಪಿದ್ದರಿಂದ ಮತ್ತು ಬಿಜೆಪಿ ಹೆಣೆದ ಪದ್ಮವ್ಯೂಹವನ್ನು ಎದುರಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೃಢವಾಗಿ ನಿಂತಿದ್ದರಿಂದ ಮಾದರಿ ನೀತಿ ಸಂಹಿತೆ ಪತನಗೊಂಡಿತು.

ಎಲ್ಲರಿಗೂ ತಿಳಿದಿರುವಂತೆ ಮಮತಾ ದೀದಿ ಅವರು, ಆಯೋಗ ತನ್ನೊಂದಿಗೆ ಶಿಸ್ತಿನಿಂದ ವರ್ತಿಸುತ್ತಿದ್ದು, ಬಿಜೆಪಿ ನಾಯಕತ್ವ ಹದ್ದು ಮೀರಿದಾಗ ಕಣ್ಣು ಮುಚ್ಚಿ ಕೂರುತ್ತದೆ ಎಂದು ಆರೋಪ ಮಾಡುತ್ತಾ ಬಂದಿದ್ದಾರೆ. ಮಾಡೆಲ್‌ ಕೋಡ್‌ ಅನ್ನು ( ನೀತಿ ಸಂಹಿತೆ ) ಅವರು 'ಮೋದಿ ಕೋಡ್‌ ʼ ಎಂದು ಕೂಡ ವ್ಯಂಗ್ಯ ಮಾಡಿದ್ದಾರೆ. ಇಡೀ ಪ್ರಕರಣದಲ್ಲಿ ಚುನಾವಣಾ ಆಯೋಗದ ಬಗ್ಗೆ ಕಂಡು ಬಂದ ವಿಶ್ವಾಸಾರ್ಹತೆಯ ಕೊರತೆ ಪ್ರಜಾಪ್ರಭುತ್ವಕ್ಕೆ ಅತಿ ಅಪಾಯಕರ.

ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಸಾಂವಿಧಾನಿಕ ನೈತಿಕತೆ ಎಂಬ ವೃತ್ತವನ್ನು ತಮ್ಮ ಸುತ್ತಲೂ ಬರೆದುಕೊಳ್ಳಬೇಕು ಮತ್ತು ಅದರ ಕೇಂದ್ರ ಭಾಗದಲ್ಲಿ ನಿಂತು ಒಂದಿನಿತೂ ಅತ್ತಿತ್ತ ವಾಲದಂತೆ ನೋಡಿಕೊಳ್ಳಬೇಕು ಎಂದು ಎಂ.ಎಸ್‌.ಗಿಲ್‌ ಅವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಹೇಳಿದ್ದ ಮಾತನ್ನು ಈಗ ನೆನೆಯುವುದು ಉತ್ತಮ.

ಚುನಾವಣಾ ಆಯುಕ್ತರ ನೇಮಕ ವಿಚಾರದಲ್ಲಿ ಉದ್ಭವಿಸುವ ವಿವಾದ ತಡೆಗಟ್ಟಲು ಪ್ರತ್ಯೇಕ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸುಮಾರು ಏಳು ದಶಕಗಳ ಹಿಂದೆ ಸಂವಿಧಾನದ ಪಿತಾಮಹ ಡಾ .ಬಿ. ಆರ್.ಅಂಬೇಡ್ಕರ್ ಹೇಳಿದ್ದರು. ಈ ಸಲಹೆ ಇಂದಿಗೂ ಗಮನಕ್ಕೆ ಬಾರದೇ ಉಳಿದಿರುವುದನ್ನು ಕಂಡರೆ ಆಶ್ಚರ್ಯ ಎನಿಸುತ್ತದೆ. ಕೇಂದ್ರ ಬಯಸಿದಂತೆ ಚುನಾವಣಾ ಆಯೋಗದ ಉನ್ನತ ಹುದ್ದೆಗಳಿಗೆ ನೇಮಕ ಆಗುವ ವ್ಯಕ್ತಿಗಳು ಯಾವುದೇ ಮಟ್ಟಕ್ಕೆ ಇಳಿಯಬಲ್ಲರು. ಇದು ನವೀನ್‌ ಚಾವ್ಲಾ ಪ್ರಕರಣದಲ್ಲಿ ಸಾಬೀತಾಯಿತು. ಚಾವ್ಲಾ ಅಧಿಕೃತ ಮಾಹಿತಿಗಳನ್ನು ಹೊರಗಿನವರಿಗೆ ಸೋರಿಕೆ ಮಾಡಿದ್ದಾರೆ ಎಂದು ಗೋಪಾಲ ಸ್ವಾಮಿ ಅವರು ಮಾಡಿದ ಕಠಿಣ ಆರೋಪಗಳನ್ನು ಕಡೆಗಣಿಸಿ ಚಾವ್ಲಾ ಅವರನ್ನು ಸಿಇಸಿ ಹುದ್ದೆಗೆ ನೇಮಿಸಲು ನಿರ್ಧಾರ ಮಾಡಲಾಯಿತು. ಹಿಂದಿನ ಸಾರ್ವತ್ರಿಕ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಮಾಡಿದ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ, ಮುಖ್ಯ ಚುನಾವಣಾ ಆಯುಕ್ತರ ನಿರ್ಧಾರ ತಪ್ಪು ಎಂಬುದನ್ನು ಚುನಾವಣಾ ಆಯುಕ್ತ ಲವಾಸಾ ಪತ್ತೆ ಮಾಡಿದ್ದರು.

ಸಾಂವಿಧಾನಿಕ ಮೌಲ್ಯಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದ ವ್ಯಕ್ತಿಗಳು ಸಾಂವಿಧಾನಿಕ ವ್ಯವಸ್ಥೆಯನ್ನು ಮುನ್ನಡೆಸಿದಾಗ ಮಾತ್ರ ಅವು ಪ್ರಜ್ವಲಿಸುತ್ತವೆ. ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡಲು ಪ್ರಧಾನಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹಾಗೂ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ವಿಶೇಷ ಸಮಿತಿಯ ನೇಮಕ ಮಾಡಬೇಕು ಎಂಬ ತೀವ್ರ ಬೇಡಿಕೆ ಇದೆ. ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರು ಕೂಡ ಇಂತಹ ಒಂದು ವ್ಯವಸ್ಥೆಗೆ ಒತ್ತು ನೀಡಿದ್ದರು. ಆದರೂ ಇಂದು ಬಿಜೆಪಿ ಸ್ವತಃ ಸಂಪೂರ್ಣ ಬದಲಾಗಿದೆ. ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿಗಾಗಿ ಪ್ರತ್ಯೇಕ ಸಮಿತಿಯೊಂದನ್ನು ನೇಮಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ಇನ್ನೂ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಎದುರು ಬಾಕಿ ಇದೆ. ಜನರ ನಿಜವಾದ ಆಶೋತ್ತರಗಳನ್ನು ಪ್ರತಿಬಿಂಬಿಸುವ ಬಲವಾದ ವ್ಯವಸ್ಥೆಯೊಂದು ಇದೆ ಎಂಬ ಸಾರ್ವಜನಿಕರ ನಂಬಿಕೆಯ ಮೇಲೆ ಪ್ರಜಾಪ್ರಭುತ್ವದ ಅಡಿಪಾಯ ನಿಂತಿದೆ. ಸಾರ್ವಜನಿಕರ ನಂಬಿಕೆಯಲ್ಲಿ ಬಿರುಕುಗಳು ಏಳುವುದನ್ನು ತಡೆಯಲು ಸಿಇಸಿ ಯನ್ನು ಸರ್ವಾನುಮತದ ಮೂಲಕ ಆಯ್ಕೆ ಮಾಡುವುದು ಮತ್ತು ಚುನಾವಣಾ ಆಯುಕ್ತರು ಸಂಸತ್ತಿಗೆ ಉತ್ತರದಾಯಿಯಾಗಿ ನಡೆದುಕೊಳ್ಳುವುದು ಅವಶ್ಯಕ ಎಂಬುದನ್ನು ದೃಢವಾಗಿ ಅರ್ಥ ಮಾಡಿಕೊಳ್ಳಬೇಕು.

ABOUT THE AUTHOR

...view details