ಕೋವಿಡ್-19 ಜಾಗತಿಕವಾಗಿ ಹೆಚ್ಚಿನ ಜನರಲ್ಲಿ ಮಾನಸಿಕ ಪ್ರಭಾವ ಬೀರಿದೆ ಎಂದು ತೋರಿಸುವ ಹಲವಾರು ವರದಿಗಳನ್ನು ನೀವು ನೋಡಿರಬಹುದು. ಕೋವಿಡ್ ಬಳಿಕ ಒತ್ತಡ, ಖಿನ್ನತೆ, ಆತಂಕ ಮತ್ತು ಇತರ ಹಲವು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ.
ವಿಶೇಷವಾಗಿ ಕೋವಿಡ್ನಿಂದ ಗುಣಮುಖರಾದವರಲ್ಲಿ ಈ ರೀತಿಯ ಪ್ರಕರಣ ಹಚ್ಚಿವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ ( ಪಿಟಿಎಸ್‌ಡಿ) ಎಂದು ಕರೆಯಲಾಗುತ್ತದೆ. ಈ ಕುರಿತು ಈಟಿವಿ ಭಾರತದ ಸುಖೀಭವ ತಂಡವು ಡೆಹ್ರಾಡೂನ್‌ನ ಕನ್ಸಲ್ಟೆಂಟ್ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ.ವೀಣಾ ಕೃಷ್ಣನ್ ಅವರೊಂದಿಗೆ ಮಾತುಕತೆ ನಡೆಸಿದೆ.
ಪಿಟಿಎಸ್‌ಡಿ ಎಂದರೇನು?:ಪಿಟಿಎಸ್‌ಡಿ ಒಂದು ಮಾನಸಿಕ ಆಘಾತವಾಗಿದೆ. ಜೀವನದಲ್ಲಿ ನಡೆಯುವ ಕೆಲ ಘಟನೆಗಳಿಂದಾಗಿ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ದೈಹಿಕ ಗಾಯ, ಲೈಂಗಿಕ ಹಿಂಸೆ, ಪ್ರೀತಿ ಪಾತ್ರರ ಹಠಾತ್ ಸಾವು, ಜೀವ ಬೆದರಿಕೆ ಮುಂತಾದವುಗಳಿಂದ ಈ ಸಮಸ್ಯೆ ಉಂಟಾಗಬಹುದು ಎಂದು ಡಾ.ವೀಣಾ ಕೃಷ್ಣನ್ ಹೇಳುತ್ತಾರೆ. ಮೇಲಿನ ಘಟನೆಗಳು ವ್ಯಕ್ತಿಯ ಜೀವನವನ್ನು ಬದಲಾಯಿಸುತ್ತದೆ ಮತ್ತು ಮೆದುಳು ಅದಕ್ಕೆ ವಿಭಿನ್ನ ರೀತಿ ಪ್ರತಿಕ್ರಿಯಿಸಬಹುದು.
ತಜ್ಞರು ವಿವರಿಸಿದಂತೆ ಪಿಟಿಎಸ್ಡಿಯ ಕೆಲ ಲಕ್ಷಣ ಹೀಗಿವೆ :
- ವ್ಯಕ್ತಿಯು ಕಿರಿ ಕಿರಿಯುಂಟು ಮಾಡುತ್ತಾನೆ ಮತ್ತು ವಿಷಯಗಳ ಕಡೆಗೆ ಗಮನ ಹರಿಸುವಲ್ಲಿ ಸಮಸ್ಯೆ ಎದುರಿಸುತ್ತಾನೆ.
- ಅವನು/ಅವಳು ಜನರಿಂದ ದೂರವಾಗುತ್ತಾರೆ ಅಥವಾ ಯಾರೊಂದಿಗೂ ಬೆರೆಯುವುದಿಲ್ಲ
- ಯಾವುದೇ ಸಂದರ್ಭ ಅಥವಾ ವಿಷಯಗಳ ಕುರಿತು ಮಾತನಾಡುವುದರಿಂದ ತಪ್ಪಿಸಿಕೊಳ್ಳುತ್ತಾರೆ
- ನಿದ್ದೆ, ಹಸಿವು ಮತ್ತು ಬಾಯಾರಿಕೆಯು ಇಲ್ಲದಿರುವುದು
- ಅಪರಾಧ, ಅವಮಾನ ಮತ್ತು ಆತಂಕದ ಭಾವನೆ
- ನಕಾರಾತ್ಮಕ ಭಾವನೆ ಹೊಂದಿರುವುದು ಮತ್ತು ಸಣ್ಣ ವಿಷಯಗಳಿಗೂ ಅಸಮಾಧಾನಗೊಳ್ಳುವುದು
- ಕೆಲ ಘಟನೆಗಳನ್ನು ಪದೇಪದೆ ನೆನಪಿಸಿಕೊಂಡು ಆತಂಕಕ್ಕೊಳಗಾಗುವುದು ಈ ರೋಗದ ಪ್ರಮುಖ ಲಕ್ಷಣ.
ಕೋವಿಡ್ಗೂ ಪಿಟಿಎಸ್ಡಿಗೂ ಸಂಬಂಧವೇನು? :ಕೋವಿಡ್ನಿಂದ ಜನರಲ್ಲಿ ಅನಿಶ್ಚಿತತೆಯ ಭಾವ ಉಂಟಾಗಿದೆ ಎಂದು ಡಾ. ಕೃಷ್ಣನ್ ವಿವರಿಸುತ್ತಾರೆ. ಅನಿಶ್ಚಿತತೆ ಇದ್ದಾಗಲೆಲ್ಲಾ, ನಾವು ತಕ್ಷಣ ಆತಂಕ ಅನುಭವಿಸಲು ಪ್ರಾರಂಭಿಸುತ್ತೇವೆ ಮತ್ತು ಭಯ ಬೆಳೆಸಿಕೊಳ್ಳುತ್ತೇವೆ. ಆ ಭಯಕ್ಕೆ ಪ್ರತಿಕ್ರಿಯೆಯಾಗಿ ಹೃದಯ ಬಡಿತ, ರಕ್ತದೊತ್ತಡ, ಅಂಗೈ ಬೆವರುವಿಕೆ ಇತ್ಯಾದಿಗಳು ಹೆಚ್ಚಾಗುತ್ತವೆ.