ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಇರ್ಶಲವಾಡಿಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭೂಕುಸಿತಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್) ತನ್ನ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಭಾನುವಾರ ಸ್ಥಗಿತಗೊಳಿಸಿದೆ. ಈ ಕುರಿತು ರಾಜ್ಯ ಸಚಿವ ಉದಯ್ ಸಾಮಂತ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, "ಜಿಲ್ಲಾಡಳಿತ, ಇತರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸಿದ ನಂತರ ಎನ್‌ಡಿಆರ್‌ಎಫ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದುವರೆಗೆ 27 ಮೃತದೇಹಗಳು ಪತ್ತೆಯಾಗಿವೆ. ಇನ್ನೂ 57 ಮಂದಿ ನಾಪತ್ತೆಯಾಗಿದ್ದಾರೆ. ಒಂದು ಶವವನ್ನು ಮಾತ್ರ ಗುರುತಿಸಲಾಗಿಲ್ಲ. ಭಾನುವಾರ ಅವಶೇಷಗಳಿಂದ ಯಾವುದೇ ಮೃತದೇಹ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ 12 ಪುರುಷರು, 10 ಮಹಿಳೆಯರು ಮತ್ತು 4 ಚಿಕ್ಕ ಮಕ್ಕಳು ಸೇರಿದ್ದಾರೆ. ಕಾಣೆಯಾದವರು ಮತ್ತು ಪ್ರಾಣ ಕಳೆದುಕೊಂಡ ವಿವರಗಳನ್ನು ಸ್ಥಳೀಯ ಆಡಳಿತದಿಂದ ಪಡೆಯಬಹುದು" ಎಂದರು.
"ಎನ್‌ಡಿಆರ್‌ಎಫ್ ಸಿಬ್ಬಂದಿ ಸೇರಿದಂತೆ 1,100ಕ್ಕೂ ಹೆಚ್ಚು ಜನರು ನಾಲ್ಕು ದಿನಗಳ ಕಾಲ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಜನರ ಓಡಾಟವನ್ನು ನಿರ್ಬಂಧಿಸುವ ಸಲುವಾಗಿ ಸಿಆರ್‌ಪಿಸಿ ಸೆಕ್ಷನ್ 144 (ನಿಷೇಧಾಜ್ಞೆ) ಜಾರಿಗೊಳಿಸಿರುವುದರಿಂದ ಆ ಸ್ಥಳದಲ್ಲಿ ಯಾರೂ ಓಡಾಡಬಾರದು. ಗ್ರಾಮದಲ್ಲಿ 228 ಜನರಿದ್ದು, ಅದರಲ್ಲಿ 57 ಮಂದಿ ಇನ್ನೂ ಪತ್ತೆಯಾಗಿಲ್ಲ, 27 ಜನರ ಮೃತದೇಹಗಳು ಪತ್ತೆಯಾಗಿವೆ. ಕುಗ್ರಾಮದ 43 ಕುಟುಂಬಗಳಲ್ಲಿ ಎರಡು ಕುಟುಂಬಗಳು ಸಂಪೂರ್ಣವಾಗಿ ಸಾವನ್ನಪ್ಪಿವೆ, 144 ಜನರನ್ನು ಒಳಗೊಂಡ 41 ಕುಟುಂಬಗಳಿಗೆ ದೇವಸ್ಥಾನದಲ್ಲಿ ಆಶ್ರಯ ನೀಡಲಾಗಿದೆ" ಎಂದು ವಿವರ ಒದಗಿಸಿದರು.
ಭೂಕುಸಿತದಲ್ಲಿ 17 ಮನೆಗಳು ಸಮಾಧಿ :ಮುಂಬೈನಿಂದ 80 ಕಿ.ಮೀ ದೂರದಲ್ಲಿರುವ ದೂರದ ಬುಡಕಟ್ಟು ಗ್ರಾಮವಾದ ಇರ್ಶಲವಾಡಿಯಲ್ಲಿ ಜುಲೈ 19ರಂದು ರಾತ್ರಿ 10:30 ರ ಸುಮಾರಿಗೆ ಭೂಕುಸಿತ ಸಂಭವಿಸಿತ್ತು. ಭೂಕುಸಿತದಲ್ಲಿ ಗ್ರಾಮದ 48 ಮನೆಗಳ ಪೈಕಿ ಕನಿಷ್ಠ 17 ಮನೆಗಳು ಸಂಪೂರ್ಣ ಅಥವಾ ಭಾಗಶಃ ಸಮಾಧಿಯಾಗಿವೆ.