ನವದೆಹಲಿ:ಮಹಿಳಾ ಐಎಎಸ್ ಅಧಿಕಾರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಆರ್‌ಎಸ್ ಅಧಿಕಾರಿಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ. ಕೊರೊನಾ ಅವಧಿಯ ವೇಳೆ ಮಹಿಳಾ ಅಧಿಕಾರಿಯ ಜೊತೆಗೆ ಆರೋಪಿ ಅಧಿಕಾರಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಂದಿನಿಂದ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳಾ ಅಧಿಕಾರಿ ದೂರು ನೀಡಿದ್ದರು.
ಪ್ರಕರಣದ ಹಿನ್ನೆಲೆ:ದೂರು ನೀಡಿರುವ ಮಹಿಳಾ ಅಧಿಕಾರಿ ಕೇಂದ್ರ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಇವರ ಪತಿಯೂ ಕೂಡ ಐಎಎಸ್ ಅಧಿಕಾರಿಯಾಗಿದ್ದಾರೆ. ಮೂರು ವರ್ಷಗಳ ಹಿಂದೆ ಕೊರೊನಾ ಕೆಲಸಕ್ಕೆ ಎಂದು ನಿಯೋಜನೆಯಾಗಿದ್ದಾಗ ಐಆರ್‌ಎಸ್ ಅಧಿಕಾರಿಯಾಗಿದ್ದ ಸೊಹೈಲ್ ಮಲಿಕ್ ಪರಿಚಯವಾಗಿತ್ತು. ಒಂದೇ ತಂಡದಲ್ಲಿ ಇಬ್ಬರೂ ಇದ್ದರು. ಈ ವೇಳೆ, ಮಹಿಳಾ ಅಧಿಕಾರಿಯ ಜೊತೆಗೆ ಒಡನಾಟ ಬೆಳೆಸಿಕೊಂಡಿದ್ದ ಐಆರ್‌ಎಸ್ ಅಧಿಕಾರಿ, ಬಳಿಕ ವೈಯಕ್ತಿಕ ವಿಚಾರಗಳಿಗೆ ಎಳೆದು ತಂದಿದ್ದ. ಅಂದಿನಿಂದ ನಿರಂತರವಾಗಿ ಆತ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ನೂತನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಶುಭ ಕೋರಿದ ಪ್ರಧಾನಿ: ಕನ್ನಡದಲ್ಲಿ ಮೋದಿ ಟ್ವೀಟ್
ಮಲಿಕ್ರ ಒತ್ತಾಯವನ್ನು ಮಹಿಳಾ ಅಧಿಕಾರಿ ಹಲವು ಬಾರಿ ವಿರೋಧಿಸಿದ್ದಾರೆ ಎನ್ನಲಾಗಿದೆ. ಆರೋಪಿಯು ತನ್ನನ್ನು ಭೇಟಿಯಾಗುವಂತೆ ಬಹಳ ಸಮಯದಿಂದ ಒತ್ತಡ ಹೇರುತ್ತಿದ್ದ. ಮಹಿಳಾ ಅಧಿಕಾರಿ ಇದನ್ನು ವಿರೋಧಿಸಿದ್ದರು. ಇಷ್ಟಾದರೂ ಬಿಡದ ಆತ ಪದೇ ಪದೆ ಕರೆ ಮಾಡುತ್ತಲೇ ಇದ್ದ. ಇದರಿಂದ ಬೇಸತ್ತ ಅಧಿಕಾರಿ ಈ ಕುರಿತು ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕಿರುಕುಳ, ಹಿಂಬಾಲಿಸುವುದು ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ದೂರು ನೀಡಿದ್ದಾರೆ. ಗಂಭೀರ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಅಧಿಕಾರಿಯನ್ನು ಬಂಧಿಸಿದ್ದಾರೆ.