ಕೋಟಾ (ರಾಜಸ್ಥಾನ): ಗಾಂಜಾ ಬೆಳೆಯುತ್ತಿದ್ದವರಿಂದ ಲಂಚ ಪಡೆದ ಆರೋಪದಡಿ ರಾಜಸ್ಥಾನದ ಎಸಿಬಿ ಅಧಿಕಾರಿಗಳ ತಂಡ ಐಆರ್‌ಎಸ್ ಅಧಿಕಾರಿ ಶಶಾಂತ್ ಯಾದವ್(38) ಅವರನ್ನು ವಶಕ್ಕೆ ಪಡೆದಿದೆ. ಅಧಿಕಾರಿಯಿಂದ 16 ಲಕ್ಷಕ್ಕೂ ಅಧಿಕ ಹಣ ಜಪ್ತಿ ಮಾಡಿದೆ.
ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ಶಶಾಂಕ್ ಯಾದವ್ರನ್ನು ಉತ್ತರ ಪ್ರದೇಶದ ಗಾಜಿಪುರದ ಸರ್ಕಾರಿ ಅಫೀಮು ಕಾರ್ಖಾನೆಯ ಜನರಲ್ ಮ್ಯಾನೇಜರ್ ಆಗಿ ನೇಮಕ ಮಾಡಲಾಗಿದೆ. ಜತೆಗೆ ಮಧ್ಯಪ್ರದೇಶದ ನೀಮುಚ್‌ನಲ್ಲಿರುವ ಅಫೀಮು ಕಾರ್ಖಾನೆಯ ಹೆಚ್ಚುವರಿ ಉಸ್ತುವಾರಿಯೂ ಆಗಿದ್ದಾರೆ.
ಶಶಾಂಕ್, ರಾಜಸ್ಥಾನದ ವಿವಿಧ ಜಿಲ್ಲೆಯ ಅಫೀಮು ಬೆಳಗಾರರಿಂದ ತಲಾ 60,000 ದಿಂದ 80,000 ರೂ.ಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ರಾಜಸ್ಥಾನದ ಈ ಪ್ರದೇಶಗಳಲ್ಲಿನ ರೈತರು ತಮ್ಮ ಅಫೀಮು ಉತ್ಪನ್ನಗಳನ್ನು ನೆರೆಯ ರಾಜ್ಯದ ನೀಮಚ್ ಅಫೀಮು ಕಾರ್ಖಾನೆಯಲ್ಲಿ ಠೇವಣಿ ಇಡಬೇಕಾಗುತ್ತದೆ. ಈ ಸಲುವಾಗಿ ಕಾರ್ಖಾನೆಯ ನೌಕರರಾದ ಅಜಿತ್ ಸಿಂಗ್ ಮತ್ತು ದೀಪಕ್ ಯಾದವ್ ಮೂಲಕ ಲಂಚ ಸಂಗ್ರಹಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಶಶಾಂಕ್ ಈ ಇಬ್ಬರಿಂದ ಲಂಚ ಪಡೆದು ಪ್ರಯಾಣಿಸಬೇಕಾದರೆ, ಅಧಿಕಾರಿಗಳು ವಾಹನವನ್ನು ತಡೆದಿದ್ದಾರೆ. ಬಳಿಕ ಸ್ವೀಟ್ ಬಾಕ್ಸ್ನಲ್ಲಿಟ್ಟು ಸಾಗಿಸುತ್ತಿದ್ದ ಹಣಕ್ಕೆ ದಾಖಲೆ ಕೇಳಿದಾಗ ಶಶಾಂಕ್ ಉತ್ತರ ಕೊಡಲು ಹಿಂದೇಟು ಹಾಕಿದ್ದಾರೆ. ಈ ಹಿನ್ನೆಲೆ ಅಧಿಕಾರಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ:ಪತಿ, ಇಬ್ಬರು ಮಕ್ಕಳನ್ನು ಬಿಟ್ಟು ಐವರು ಮಕ್ಕಳ ತಂದೆ ಜೊತೆ ಓಡಿ ಹೋದ ಮಹಿಳೆ
ಅಫೀಮು ಕಾರ್ಖಾನೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸುಮಾರು 6,000 ಅಫೀಮು ಕೃಷಿಕರಿಂದ ವರ್ಷಕ್ಕೆ 30 ರಿಂದ 36 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ ಎಂದು ಅವರು ಹೇಳಿದರು.