ಕೊಚ್ಚಿ (ಕೇರಳ):ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಪ್ರಕ್ರಿಯೆಗೆ ವಿಳಂಬವಾದ್ದರಿಂದ ಸಿಟ್ಟಿಗೆದ್ದ ಮಹಿಳಾ ವಿಮಾನ ಪ್ರಯಾಣಿಕರೊಬ್ಬರು ಹುಸಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಪ್ರಕರಣ ಸಂಬಂಧ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈಗೆ ತೆರಳಬೇಕಿದ್ದ ವಿಮಾನವನ್ನು ಸುಮಾರು ಒಂದು ಗಂಟೆ ತಡ ಮಾಡಿದ್ದಕ್ಕಾಗಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯ ವಿರುದ್ಧ ದೂರು ದಾಖಲಿಸುವ ಪ್ರಕ್ರಿಯೆಯಲ್ಲಿದೆ ಎಂದು ಅವರು ಹೇಳಿದರು.
ಬೆಳಗ್ಗೆ 6 ಗಂಟೆ ಸುಮಾರಿಗೆ ಟೇಕ್ ಆಫ್ ಆಗಬೇಕಿದ್ದ ಕೊಚ್ಚಿ - ಮುಂಬೈ ವಿಮಾನದ ಚೆಕ್ - ಇನ್ ಪ್ರಕ್ರಿಯೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ಮಾಹಿತಿ ನೀಡಿವೆ. ಚೆಕ್ - ಇನ್ ಪ್ರಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ಸಿಟ್ಟಿಗೆದ್ದ ಮಹಿಳೆ ತನ್ನ ಸಾಮಾನು ಸರಂಜಾಮುಗಳಲ್ಲಿ ಬಾಂಬ್ ಇತ್ತು. ಇದು ಲಗೇಜ್ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ತೀವ್ರಗೊಳಿಸಲು ಕಾರಣವಾಯಿತು ಮತ್ತು ಪರಿಣಾಮವಾಗಿ ತಾನು ಪ್ರಯಾಣಿಸಬೇಕಿದ್ದ ವಿಮಾನದ ನಿಗದಿತ ನಿರ್ಗಮನವು ಸುಮಾರು ಒಂದು ಗಂಟೆ ವಿಳಂಬವಾಯಿತು ಎಂದು ಮಹಿಳೆ ಹೇಳಿದ್ದರು. ನೆಡುಂಬಶ್ಶೇರಿ ಪೊಲೀಸ್ ಠಾಣೆಯ ಅಧಿಕಾರಿ ಆಕೆಯ ಹೇಳಿಕೆ ದಾಖಲಿಸಿಕೊಂಡು ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.