ಅಯೋಧ್ಯೆ(ಉತ್ತರ ಪ್ರದೇಶ): ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಶ್ರೀರಾಮನ ಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ರಾಮನ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಅಲ್ಲ ಎಂದು ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದರು.
ಉದ್ಘಾಟನಾ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿಲ್ಲ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ದಾಸ್, "ರಾಮನ ಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗುತ್ತದೆ. ರಾಮನ ಹೆಸರಿನಲ್ಲಿ ಬಿಜೆಪಿ ಹೋರಾಡುತ್ತಿದೆ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು. ನಮ್ಮ ಪ್ರಧಾನಿಯನ್ನು ಎಲ್ಲೆಡೆ ಗೌರವಿಸಲಾಗುತ್ತದೆ. ಅವರು ಅಧಿಕಾರಾವಧಿಯಲ್ಲಿ ಅಪಾರ ಕೆಲಸ ಮಾಡಿದ್ದಾರೆ. ಇದು ರಾಜಕೀಯವಲ್ಲ, ಭಕ್ತಿ" ಎಂದರು.
ಶಿವಸೇನಾ ನಾಯಕ ಸಂಜಯ್ ರಾವತ್, "ರಾಮನನ್ನು ತಮ್ಮ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸುವುದೊಂದೇ ಬಾಕಿ ಇದೆ" ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ದಾಸ್, "ಸಂಜಯ್ ರಾವತ್ ಅವರಿಗೆ ಎಷ್ಟು ನೋವಿದೆ ಎಂದರೆ ಅದನ್ನು ಹೇಳಿಕೊಳ್ಳಲೂ ಆಗುತ್ತಿಲ್ಲ. ಅವರು ರಾಮನ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಿದ್ದವರು. ನಿಜವಾಗಿಯೂ ರಾಮನನ್ನು ನಂಬಿದವರು ಅಧಿಕಾರದಲ್ಲಿದ್ದಾರೆ. ಅವರು ಅಸಂಬದ್ಧವಾಗಿ ಮಾತನಾಡುತ್ತಾ ಶ್ರೀರಾಮನನ್ನು ಅವಮಾನಿಸುತ್ತಿದ್ದಾರೆ" ಎಂದು ತಿಳಿಸಿದರು.