ಮೊರ್ಬಿ (ಗುಜರಾತ್): ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯವಾದ ಶ್ರೀರಾಮ ಮಂದಿರದ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಶ್ರೀ ರಾಮ ಮಂದಿರಕ್ಕಾಗಿ ಹೋರಾಡಿದ ದಿಗ್ಗಜರು, ಕರಸೇವಕರಿಂದ ಹಿಡಿದು ಅಳಿಲು ಸೇವೆ ನೀಡಿದ ಹಲವಾರು ವ್ಯಕ್ತಿಗಳಿಗೆ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುತ್ತಿದೆ. ಇದೀಗ ಜ. 22 ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಮೊರ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ನರ್ಸ್ 82 ವರ್ಷದ ಭಾನುಬೆನ್ ಸೋಲಂಕಿ ಅವರನ್ನು ಕೂಡ ಆಹ್ವಾನಿಸಲಾಗಿದೆ.
ಸೋಲಂಕಿ ಅವರಿಗೆ ಆಹ್ವಾನ ಪತ್ರ ನೀಡಿರುವುದಕ್ಕೂ ಒಂದು ಕಾರಣವಿದೆ. ಹೌದು, ಸೋಲಂಕಿ ಹಾಗೂ ಶಾಲಾ ಶಿಕ್ಷಕಿಯಾಗಿದ್ದ ಅವರ ದಿವಂಗತ ಸಹೋದರಿ ತಮ್ಮ ನಿವೃತ್ತಿಯ ನಂತರ ಬಂದಿದ್ದ ಒಟ್ಟು 27 ಲಕ್ಷ ರೂಪಾಯಿ ಹಣವನ್ನು ರಾಮ ಮಂದಿರದ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದರು. ರಾಮ ಮಂದಿರದ ನಿರ್ಮಾಣದಲ್ಲಿ ಹಿರಿಯರಾದ ಸೋಲಂಕಿಯವರ ಸೇವೆಯನ್ನೂ ಗುರುತಿಸಿ, ರಾಮ ಮಂದಿರ ಟ್ರಸ್ಟ್ ಅವರಿಗೂ ಆಹ್ವಾನ ಪತ್ರಿಕೆಯನ್ನು ತಲುಪಿಸಿದೆ.
ಏತನ್ಮಧ್ಯೆ, 10 ವರ್ಷಗಳ ಹಿಂದೆ ಭಾನುಬೆನ್ ಸೋಲಂಕಿ ಹಾಗೂ ಅವರ ಸಹೋದರಿ ಅಯೋಧ್ಯೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಟೆಂಟ್ನಲ್ಲಿ ಶ್ರೀರಾಮನ ಮೂರ್ತಿಯನ್ನು ಇರಿಸಿದ್ದನ್ನು ಕಂಡು ಅವರ ಹೃದಯ ಕಲಕಿತ್ತು. ಅಂತೆಯೇ ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದಷ್ಟು ಸಹಾಯವನ್ನು ನೀಡಲು ನಿರ್ಧರಿಸಿದ್ದರು. ಹಾಗಾಗಿ ನಿವೃತ್ತಿ ನಂತರ ಬಂದಿದ್ದ 27 ಲಕ್ಷ ರೂಪಾಯಿ ಹಣವನ್ನು ಮಂದಿರ ನಿರ್ಮಾಣಕ್ಕೆಂದು ದೇಣಿಗೆ ನೀಡಿದ್ದರು. ಸೋಲಂಕಿ ಅವರ ಸಹಾಯವನ್ನು ರಾಮ ಮಂದಿರ ಟ್ರಸ್ಟ್ ಗುರುತಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ.