ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಕಲು ಮಾಡುವುದನ್ನು ತಡೆಯಲು ರಾಜಸ್ಥಾನದಲ್ಲಿ ಮೂರು ದಿನಗಳ ಕಾಲ ಇಂಟರ್‌ನೆಟ್ ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಗೆ ನೀಡಿದೆ. ಇಂಟರ್‌ನೆಟ್ ಸ್ಥಗಿತಗೊಳಿಸುವುದರಿಂದ ನ್ಯಾಯಂಗದ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಅಡ್ವೋಕೇಟ್ ವಿಶಾಲ್ ತಿವಾರಿ ಅವರು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರ ನೇತೃತ್ವದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್‌ನೆಟ್ ಸ್ಥಗಿತಕ್ಕೆ ಸಂಬಂಧಿಸಿದಂತೆ ಅನುರಾಧ ಬಾಸಿನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕೋರಿದರು. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಅರನ್ನೊಳಗೊಂಡ ಪೀಠವು ಹೋಳಿ ವಿರಾಮದ ನಂತರ ವಿಷಯವನ್ನು ಆಲಿಸಲಾಗುವುದು ಎಂದು ಹೇಳಿದೆ.
ಮನವಿಯಲ್ಲಿ ಹೀಗೆ ಹೇಳಲಾಗಿದೆ : ‘‘ನಮ್ಮ ದೇಶದಲ್ಲಿ ಇಂಟರ್ನೆಟ್ನ ಬಳಕೆಯು ಬಹುಬೇಗ ಹೆಚ್ಚಿದೆ, ಈ ಸಂವಹನ ಮಾಧ್ಯಮದ ಮೂಲಕ ಬಹಳಷ್ಟು ವೃತ್ತಿಪರರು ದಿನ ನಿತ್ಯದ ಸೌಕರ್ಯಗಳನ್ನು ಆನಂದಿಸುತ್ತಿದ್ದಾರೆ ಮತ್ತು ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್ ಸಮಯದ ನಂತರ ಬಹಳಷ್ಟು ಜನರು, ವೃತ್ತಿಪರರು ಮತ್ತು ಸ್ವತಂತ್ರ ಉದ್ಯೋಗಿಗಳು ಇಂಟರ್‌ನೆಟ್ ಮೂಲಕವೇ ತಮ್ಮ ಕೆಲಸಗಳನ್ನು ಮಾಡುತ್ತಿದ್ದಾರೆ. ನಮ್ಮ ದೇಶದ ನ್ಯಾಯಾಂಗವು ಸಹ ಹೈಬ್ರಿಡ್ ರೀತಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೆಲಸ ಮಾಡುತ್ತಿದೆ. ಆದ್ದರಿಂದ, ಈ ಇಂಟರ್‌ನೆಟ್ ಸ್ಥಗಿತದ ಮೂಲಕ, ವೃತ್ತಿ ಅಭ್ಯಾಸ ಮಾಡುವ ಹಕ್ಕು ಮತ್ತು ಸಂವಿಧಾನದ 19 (1) (ಜಿ) ಮತ್ತು ಆರ್ಟಿಕಲ್ 21ರ ಅಡಿ ನ್ಯಾಯದ ಪ್ರವೇಶವನ್ನು ಗಂಭಿರವಾಗಿ ಉಲ್ಲಂಘಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.