ಪಶ್ಚಿಮ ಬಂಗಾಳ: ನೊಬೆಲ್ ಪುರಸ್ಕೃತ ಜಗತ್ಪ್ರಸಿದ್ಧ ಸಾಹಿತಿ ರವೀಂದ್ರನಾಥ ಟಾಗೋರ್ ಅವರು ಬದುಕಿ ಬಾಳಿದ ಅವರ ಮನೆ 'ಶಾಂತಿನಿಕೇತನ' ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡ ಖುಷಿಯನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ. ಅದರಲ್ಲೂ ಬಂಗಾಳದ ಬಿರ್ಭೂಮ್ ಜಿಲ್ಲೆಯ ವಿಶ್ವ ಭಾರತಿ ವಿಶ್ವವಿದ್ಯಾಲಯದಲ್ಲಿ ಭಾರಿ ಸಂಭ್ರಮ ಮನೆ ಮಾಡಿದೆ.
ವಿಶ್ವವಿದ್ಯಾಲಯದ ಐಕಾನಿಕ್ ಕಟ್ಟಡ ಮತ್ತು ಕಾಂಪೌಂಡ್ ಅಲಂಕಾರಿಕ ದೀಪಗಳಿಂದ ಜಗಮಗಿಸುತ್ತಿದೆ. ವಿವಿ ಅಧ್ಯಾಪಕರು ಹಾಗೂ ಸಿಬ್ಬಂದಿ, ಹಾಸ್ಟೆಲ್ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು, ರವೀಂದ್ರ ಸಂಗೀತವನ್ನು ಹಾಡುವ ಮೂಲಕ ಶಾಂತಿನಿಕೇತನಕ್ಕೆ ಅಂತರರಾಷ್ಟ್ರೀಯ ಮನ್ನಣೆ ಸಿಕ್ಕ ಸಂತೋಷವನ್ನು ಸಂಭ್ರಮಿಸಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಶಾಂತಿನಿಕೇತನ ಸೇರ್ಪಡೆಯಾಗಿರುವ ಸುದ್ದಿ ಪ್ರಕಟವಾಗುತ್ತಿದ್ದಂತೆ, ತಮ್ಮ ಎಕ್ಸ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. "ನಮ್ಮ ಶಾಂತಿನಿಕೇತನ, ಗುರುದೇವ್ ರವೀಂದ್ರನಾಥ್ ಟಾಗೋರ್ ಅವರ ಮನೆ ಇದೀಗ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಅಂತಿಮವಾಗಿ ಸೇರ್ಪಡೆಗೊಂಡಿರುವುದು ಖುಷಿ ಹಾಗೂ ಹೆಮ್ಮೆ ವಿಷಯ. ಬಿಸ್ವಾ ಬಾಂಗ್ಲಾದ ಹೆಮ್ಮೆಯಾಗಿರುವ ಶಾಂತಿನಿಕೇತನವನ್ನು ಕವಿ ರವೀಂದ್ರನಾಥ ಟಾಗೋರ್ ನಮಗೆ ನೀಡಿದರೆ, ಪೀಳಿಗೆಯಿಂದ ಪೀಳಿಗೆಗೆ ನಮ್ಮ ಬಂಗಾಳದ ಜನ ಅದನ್ನು ಬೆಂಬಲಿಸಿಕೊಂಡು ಬರುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.