ಹೈದರಾಬಾದ್: ಭಾಷೆಯು ಮನುಷ್ಯನ ಭಾವಾಭಿವ್ಯಕ್ತಿಯ ಅತಿ ಮುಖ್ಯ ಮಾಧ್ಯಮ. ಮಾನವನ ವಿಕಾಸ ಕಾಲದಿಂದ ವಿಶ್ವದಲ್ಲಿ ಸಾವಿರಾರು ಭಾಷೆಗಳು ಬೆಳೆದು ಬಂದಿವೆ. ಆರಂಭದಲ್ಲಿ ಶೈಶವಾವಸ್ಥೆಯಲ್ಲಿದ್ದ ಭಾಷೆಗಳು ತಮ್ಮಲ್ಲಿನ ಶಬ್ದ ಭಂಡಾರವನ್ನು ಹೆಚ್ಚಿಸಿಕೊಳ್ಳುತ್ತ ಪರಿಪೂರ್ಣವಾಗಿ ಬೆಳೆದಿವೆ. ವ್ಯಕ್ತಿಯೊಬ್ಬ ಹುಟ್ಟುತ್ತಲೇ ಮಾತನಾಡಲು ಕಲಿಯುವ ಪ್ರಥಮ ಭಾಷೆಯು ಸಾಮಾನ್ಯವಾಗಿ ಆತನ ಮಾತೃ ಭಾಷೆಯಾಗಿರುತ್ತದೆ. ಮಾತೃ ಭಾಷೆಯ ಮೂಲಕ ವ್ಯಕ್ತಿಯೊಬ್ಬ ಅತಿ ಸ್ಪಷ್ಟವಾಗಿ ತನ್ನ ವಿಚಾರಗಳನ್ನು ಹಂಚಿಕೊಳ್ಳಬಲ್ಲ. ಹೀಗಾಗಿಯೇ ಮಾತೃಭಾಷೆಗೆ ತಾಯಿಯ ಸ್ಥಾನವನ್ನು ನೀಡಲಾಗಿದ್ದು, ಮಾತೃಭಾಷೆ ತಾಯಿ ಭಾಷೆಯಾಗಿದೆ.
ಇಂದು (ಫೆ.21) ಅಂತಾರಾಷ್ಟ್ರೀಯ ಮಾತೃಭಾಷಾ ದಿನ ಆಚರಿಸಲಾಗುತ್ತಿದ್ದು, ಈ ದಿನಾಚರಣೆಯ ಉದ್ದೇಶ ಹಾಗೂ ವೈಶಿಷ್ಟ್ಯಗಳನ್ನು ತಿಳಿಯೋಣ.
ಶಿಕ್ಷಣದಲ್ಲಿ ಮಾತೃಭಾಷೆಗೆ ಉನ್ನತ ಸ್ಥಾನ
ಭಾಷೆ ಹಾಗೂ ಬಹುಭಾಷೆಗಳ ಬಳಕೆಯಿಂದ ಪ್ರತಿಯೊಬ್ಬರ ಸುಸ್ಥಿರ ಅಭಿವೃದ್ಧಿ ಮತ್ತು ಅಭಿವೃದ್ಧಿಯಲ್ಲಿ ಕ್ರಿಯಾಶೀಲವಾಗಿ ಒಳಗೊಳ್ಳುವಿಕೆಯನ್ನು ಖಾತ್ರಿಪಡಿಸುವಿಕೆಯ ಅಭಿವ್ಯಕ್ತಿಯಾಗಿ ವಿಶ್ವ ಮಾತೃಭಾಷಾ ದಿನ ಆಚರಿಸಲಾಗುತ್ತದೆ.
ಶಿಕ್ಷಣವು ಕಲಿಕೆಯ ಮೂಲ ಅಡಿಪಾಯವಾಗಿದ್ದು, ಮಗುವಿನ ಬಾಲ್ಯಾವಸ್ಥೆಯ ಶಿಕ್ಷಣ ಮಾತೃಭಾಷೆಯಲ್ಲಿಯೇ ಆರಂಭವಾಗಬೇಕು ಎಂದು ವಿಶ್ವಸಂಸ್ಥೆಯು ಹೇಳಿದೆ.
ಯುನೆಸ್ಕೊ ಪಾತ್ರ
ವಿಶ್ವ ಮಾತೃಭಾಷಾ ದಿನದಂದು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಅಂಗಗಳು (ಯುನೆಸ್ಕೊ) ಭಾಷೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಮಹತ್ವ ಸಾರುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಮಾತೃಭಾಷೆಗೆ ಅತಿ ಹಿರಿದಾದ ಸ್ಥಾನ ನೀಡುತ್ತ, ಅದೇ ಸಮಯದಲ್ಲಿ ಇನ್ನಷ್ಟು ಭಾಷೆಗಳನ್ನು ಕಲಿಯುವಿಕೆಗೆ ಉತ್ತೇಜನ ನೀಡಲಾಗಿದೆ. ಆಯಾ ಪ್ರದೇಶದ ಸರ್ಕಾರಗಳು ಈ ದಿನದಂದು ಹೆಚ್ಚು ಭಾಷೆಗಳ ಕಲಿಕೆಗೆ ಪ್ರೋತ್ಸಾಹದಾಯಕ ಕ್ರಮಗಳನ್ನು ಘೋಷಿಸಬಹುದಾಗಿದೆ.
ವಿಶ್ವ ಮಾತೃಭಾಷಾ ದಿನದ ಇತಿಹಾಸ
ವಿಶ್ವ ಮಾತೃಭಾಷಾ ದಿನದ ಇತಿಹಾಸದ ಆಳಕ್ಕೆ ಹೋದರೆ, ಘಟನಾವಳಿಗಳು ನಮ್ಮನ್ನು 1952ನೇ ಇಸ್ವಿಗೆ ಕೊಂಡೊಯ್ಯುತ್ತವೆ. 1952ರಲ್ಲಿ ಬಾಂಗ್ಲಾದೇಶದ ಢಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಾತೃಭಾಷೆಗಾಗಿ ಬೃಹತ್ ಹೋರಾಟವನ್ನೇ ನಡೆಸಿದ್ದರು. ಬಂಗಾಳಿ ಭಾಷೆಯನ್ನೇ ಬಾಂಗ್ಲಾದೇಶದ ಅಧಿಕೃತ ಭಾಷೆಯನ್ನಾಗಿ ಮುಂದುವರಿಸಬೇಕೆಂದು ವಿದ್ಯಾರ್ಥಿಗಳ ಆಗ ಹೋರಾಟ ಮಾಡಿದ್ದರು. ಈ ಹೋರಾಟಕ್ಕೂ ಒಂದು ಇತಿಹಾಸವಿದೆ. ಭಾರತ ವಿಭಜನೆಯಾಗಿ ಪಾಕಿಸ್ತಾನ ಪ್ರತ್ಯೇಕ ದೇಶವಾದ ನಂತರ, ಪಾಕಿಸ್ತಾನವು ಪೂರ್ವ ಪಾಕಿಸ್ತಾನ ಹಾಗೂ ಪಶ್ಚಿಮ ಪಾಕಿಸ್ತಾನ ಎಂದಾಗಿತ್ತು. ಆಗಿನ ಪೂರ್ವ ಪಾಕಿಸ್ತಾನವೇ ಈಗಿನ ಬಾಂಗ್ಲಾದೇಶ. ಆಗ ಪಾಕಿಸ್ತಾನ ಸರ್ಕಾರವು ಎರಡೂ ಭಾಗದಲ್ಲಿ ಉರ್ದುವನ್ನೇ ಏಕೈಕ ಅಧಿಕೃತ ರಾಷ್ಟ್ರಭಾಷೆಯನ್ನಾಗಿ ಘೋಷಿಸಿತ್ತು. ಆದರೆ, ಇದರ ವಿರುದ್ಧ ಸಿಡಿದೆದ್ದ ಪೂರ್ವ ಪಾಕಿಸ್ತಾನದ ಜನತೆ ತಮ್ಮ ಮೂಲ ಮಾತೃಭಾಷೆ ಬಂಗಾಳಿಯೇ ಅಧಿಕೃತ ಭಾಷೆಯಾಗಬೇಕೆಂದು ಹೋರಾಟ ಮಾಡಿ ಅನೇಕರು ಪ್ರಾಣವನ್ನೂ ಕಳೆದುಕೊಂಡಿದ್ದರು. ನಂತರ ಹೋರಾಟಕ್ಕೆ ಮಣಿದ ಪಾಕ್ ಸರ್ಕಾರ 1956ರಲ್ಲಿ ಪೂರ್ವ ಪಾಕಿಸ್ತಾನಕ್ಕೆ ಬಂಗಾಳಿ ಭಾಷೆಯನ್ನೇ ಮಾತೃಭಾಷೆಯಾಗಿ ಘೋಷಿಸಿತು. 1971ರಲ್ಲಿ ಪೂರ್ವ ಪಾಕಿಸ್ತಾನ ಸ್ವತಂತ್ರ ರಾಷ್ಟ್ರವಾಗಿ ಬಾಂಗ್ಲಾದೇಶ ಎಂದು ನಾಮಕರಣ ಹೊಂದಿತು. ಆದರೂ ಬಂಗಾಳಿ ಮಾತೃಭಾಷೆಯಾಗಿ ಘೋಷಣೆಯಾದ ಫೆ.21 ರಂದು ಇಂದಿಗೂ ಅಲ್ಲಿ ರಾಷ್ಟ್ರೀಯ ರಜಾ ದಿನವಾಗಿದ್ದು, ಆ ದಿನವನ್ನು ವಿಶ್ವ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ.
ಮಾತೃಭಾಷೆಯ ಮಹತ್ವ
ವಿಶ್ವದಲ್ಲಿ ಸುಮಾರು 6 ಸಾವಿರ ಭಾಷೆಗಳನ್ನು ಮಾತನಾಡಲಾಗುತ್ತದೆ. ಆದರೆ, ಇದರಲ್ಲಿ ಶೇ 43ಕ್ಕೂ ಹೆಚ್ಚು ಭಾಷೆಗಳು ಅವಸಾದಂಚಿನಲ್ಲಿವೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ಪ್ರತಿ ಎರಡು ವಾರಕ್ಕೊಂದು ಭಾಷೆ ವಿಶ್ವದಿಂದ ಕಣ್ಮರೆಯಾಗುತ್ತಿದೆ ಎಂದರೆ ಭಾಷಾ ಅವಸಾನದ ಅರ್ಥ ನಿಮಗಾಗಬಹುದು. ಭಾಷೆಯೊಂದು ಅವಸಾನವಾದರೆ ಅದರ ಜೊತೆಗೆ ಆ ಭಾಷೆಯ ಸಂಸ್ಕೃತಿ ಹಾಗೂ ಜ್ಞಾನ ಸಂಪ್ರದಾಯವೂ ಹಾಳಾದಂತೆ. ಅದಕ್ಕಾಗಿಯೇ ಎಲ್ಲ ಭಾಷೆಗಳನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.