ನವದೆಹಲಿ:ಮಹಾಮಾರಿ ಕೋವಿಡ್-19 ಎರಡನೇ ಅಲೆಯಿಂದ ಭಾರತವೂ ಸೇರಿದಂತೆ ಜಗತ್ತು ಚೇತರಿಸಿಕೊಳ್ಳುತ್ತಿದೆ. ಹೀಗಾಗಿ, ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯಲ್ಲಿನ ಮಾರ್ಗಸೂಚಿಯಲ್ಲಿ ಮತ್ತಷ್ಟು ಸಡಿಲಿಕೆ ಮಾಡುವ ನಿರೀಕ್ಷೆ ಇದೆ. ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳ ಮೇಲೆ ಹೇರಿಕೆ ಮಾಡಿರುವ ನಿರ್ಬಂಧಗಳು ನವೆಂಬರ್ 30ಕ್ಕೆ ಮುಕ್ತಾಯಗೊಳ್ಳಲಿವೆ. ತದನಂತರ ಅದರ ಮೇಲಿನ ಎಲ್ಲ ನಿಯಮಗಳನ್ನು ತೆರವುಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಭಾರತದಿಂದ 25 ದೇಶಗಳಿಗೆ ವಿಮಾನ ಹಾರಾಟ ಸೇವೆ ಒದಗಿಸಲಾಗಿದ್ದು, ಎಲ್ಲದರ ಮೇಲೂ ಕೋವಿಡ್ ನಿರ್ಬಂಧವಿದೆ. ಇದೀಗ ವರ್ಷಾಂತ್ಯಕ್ಕೆ ಅವುಗಳನ್ನು ತೆಗೆದುಹಾಕುವ ಸಾಧ್ಯತೆ ಕಂಡುಬಂದಿದೆ.