ಹೈದರಾಬಾದ್:ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸುವುದರೊಂದಿಗೆ ಸಮಾಜದ ಅಭಿವೃದ್ಧಿಗೆ ಸ್ವಚ್ಛ ಮತ್ತು ಸುಂದರ ಪತ್ರಿಕೋದ್ಯಮ ಅಗತ್ಯ. ಉತ್ತಮ ಪತ್ರಿಕೋದ್ಯಮಕ್ಕೆ ಪತ್ರಕರ್ತರ ಸುರಕ್ಷತೆ ಅತ್ಯವಶ್ಯಕ. ಆದರೆ ಕಳೆದ ಹಲವು ವರ್ಷಗಳಿಂದ ಪತ್ರಿಕೋದ್ಯಮವು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ವೃತ್ತಿಯಾಗಿ ಮಾರ್ಪಟ್ಟಿದೆ. ಯುದ್ಧ, ನೈಸರ್ಗಿಕ ವಿಕೋಪ ಅಥವಾ ಇತರ ಅಪಾಯಕಾರಿ ಪ್ರದೇಶಗಳಲ್ಲಿ ವರದಿ ಮಾಡುವಾಗ ಅನೇಕ ಮಾಧ್ಯಮ ಸಿಬ್ಬಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಅಥವಾ ಕಾಣೆಯಾಗುತ್ತಿದ್ದಾರೆ. ದೇಶವಿರೋಧಿ ಕೃತ್ಯಗಳು ಸೇರಿದಂತೆ ಇತರೆ ಅಕ್ರಮ ಎಸಗುವವರ ವಿರುದ್ಧ ವರದಿ ಪ್ರಕಟವಾದ ನಂತರ ಹಲವು ಪತ್ರಕರ್ತರ ಹತ್ಯೆಗಳಾಗಿವೆ. ಇಂಥ ಬಹುತೇಕ ಪ್ರಕರಣಗಳಲ್ಲಿ ಹಲವು ಪತ್ರಕರ್ತರ ಕುಟುಂಬಸ್ಥರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ.
ವಿಶ್ವಸಂಸ್ಥೆಯ ಮಾಹಿತಿ ಪ್ರಕಾರ, ಹತ್ತರ ಪೈಕಿ ಒಂಬತ್ತು ಪತ್ರಕರ್ತರ ಹತ್ಯೆ ಪ್ರಕರಣ ಬಗೆಹರಿದಿಲ್ಲ. ಪತ್ರಕರ್ತರ ಹತ್ಯೆ ಅಸ್ಪಷ್ಟವಾಗಿ ಉಳಿಯಬಾರದು. ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು. ಈ ನಿಟ್ಟಿನಲ್ಲಿ 2014ರಿಂದ ಪ್ರತಿ ವರ್ಷ 'ಇಂಟರ್ನ್ಯಾಷನಲ್ ಡೇ ಟು ಎಂಡ್ ಇಂಪ್ಯೂನಿಟಿ ಫಾರ್ ಕ್ರೈಮ್ಸ್ ಅಗೈನ್ಸ್ಟ್ ಜರ್ನಲಿಸ್ಟ್ಸ್' ಎಂಬ ದಿನವನ್ನು ನವೆಂಬರ್ 2ರಂದು ಆಚರಿಸಲಾಗುತ್ತದೆ. ಈ ವರ್ಷದ ದಿನದ ಕಾರ್ಯಕ್ರಮವನ್ನು 'ಪತ್ರಕರ್ತರ ಮೇಲಿನ ಹಿಂಸಾಚಾರ, ಚುನಾವಣಾ ಸಮಗ್ರತೆ ಮತ್ತು ಸಾರ್ವಜನಿಕ ನಾಯಕತ್ವದ ಪಾತ್ರ' ಎಂಬ ಘೋಷ ವಾಕ್ಯದೊಂದಿಗೆ ಚರ್ಚಿಸಲಾಗುತ್ತದೆ.
ಫ್ರೆಂಚ್ ಪತ್ರಕರ್ತರ ಕೊಲೆ: ಪತ್ರಕರ್ತರ ಸುರಕ್ಷತೆ ಮತ್ತು ನಿರ್ಭಯತೆಯ ವಿಷಯದ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಆಧಾರದಡಿ ನವೆಂಬರ್ 2 ಅನ್ನು 'International Day to End Impunity for Crimes against Journalists 2023' ಎಂದು ಘೋಷಿಸಲಾಗಿದೆ. 21 ಫೆಬ್ರವರಿ 2014ರಂದು ವಿಶ್ವಸಂಸ್ಥೆಯು ಈ ಸಂಬಂಧ ಅಧಿಸೂಚನೆ ಹೊರಡಿಸಿತ್ತು. 2 ನವೆಂಬರ್ 2013ರಂದು ಮಾಲಿಯಲ್ಲಿ ಇಬ್ಬರು ಫ್ರೆಂಚ್ ಪತ್ರಕರ್ತರನ್ನು ಕೊಲ್ಲಲಾಯಿತು. ಅವರ ಸ್ಮರಣಾರ್ಥಕ ನವೆಂಬರ್ 2 ರಂದು 'International Day to End Impunity for Crimes against Journalists' ಅನ್ನು ಆಚರಿಸಲಾಗುತ್ತದೆ. ಫ್ರೆಂಚ್ ರೇಡಿಯೊ ಸ್ಟೇಷನ್ ಆರ್‌ಎಫ್‌ಐನ ಇಬ್ಬರು ಪತ್ರಕರ್ತರಾದ ಕ್ಲೌಡ್ ವೆರ್ಲಾನ್ ಮತ್ತು ಘಿಸ್ಲೈನ್ ಡುಪಾಂಟ್ ಅವರನ್ನು ಮಾಲಿಯ ಉತ್ತರ ನಗರ ಕಿಡಾಲ್‌ನಲ್ಲಿ ಅಪಹರಿಸಿ ಹತ್ಯೆ ಮಾಡಲಾಗಿತ್ತು.
*ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಆ್ಯಂಡ್ ಕಲ್ಚರಲ್ ಆರ್ಗನೈಸೇಶನ್ನಿನ (ಯುನೆಸ್ಕೋ) UNESCO Observatory of Killed Journalists ಪ್ರಕಾರ, 1993ರಿಂದ ಇಲ್ಲಿಯವರೆಗೆ 1,600ಕ್ಕೂ ಹೆಚ್ಚು ಪತ್ರಕರ್ತರನ್ನು ಕೊಲೆ ಮಾಡಲಾಗಿದೆ.