ಹೈದರಾಬಾದ್: ಅನಾದಿ ಕಾಲದಿಂದಲೂ ಸಮಾಜದಲ್ಲಿ ಕೆಲವೊಂದು ನಿರ್ದಿಷ್ಟ ಸರಹದ್ದುಗಳನ್ನು ಸೃಷ್ಟಿಸಿ, ಹೆಣ್ಣನ್ನು ಹದ್ದುಬಸ್ತಿನಲ್ಲಿಡುವ ಮೌಲ್ಯವ್ಯವಸ್ಥೆ ಪದೇ ಪದೆ ತಲೆ ಎತ್ತುತ್ತಲೇ ಬಂದಿದೆ. ಅನೇಕ ಸಂದರ್ಭಗಳಲ್ಲಿ ಇದು ನಯವಾಗಿರುತ್ತದೆ, ಸೂಕ್ಷ್ಮವಾಗಿರುತ್ತದೆ. ಮತ್ತೆ ಕೆಲವೆಡೆ, ಆಚರಣೆಗಳ ನೆಪದಲ್ಲಿ ಹೆಣ್ಣಿನ ಬದುಕನ್ನೇ ನಾಶಮಾಡಲಾಗುತ್ತದೆ. ಇಂತಹ ಸಾಂಪ್ರದಾಯಿಕ ಆಚರಣೆಗಳಲ್ಲಿ ಅತ್ಯಂತ ಘೋರ ಮತ್ತು ತುಚ್ಛವಾಗಿ ಕಂಡುಬರುವುದೆಂದರೆ, ಅದು ಯೋನಿ ಊನ ಅಥವಾ 'ಸ್ತ್ರೀ ಜನನಾಂಗ ಛೇದನ' (ಫೀಮೇಲ್ ಜೆನೈಟಲ್ ಮ್ಯುಟಿಲೇಷನ್ –ಎಫ್‌ಜಿಎಂ). ಈ ಕುರಿತ ವಿಶೇಷ ವರದಿ ಇಲ್ಲಿದೆ...
ಸ್ತ್ರೀಜನನಾಂಗ ಛೇದನ ಎಂದರೇನು? (ಫೀಮೇಲ್ ಜೆನಿಟಲ್ ಮ್ಯುಟಿಲೇಷನ್ –ಎಫ್‌ಜಿಎಂ)
ಮೂರು-ನಾಲ್ಕು ವರ್ಷದ ಹೆಣ್ಣುಮಗುವಿನ ಯೋನಿಯ ಸಂವೇದಿ ಭಾಗವನ್ನು ಮತ್ತು ಯೋನಿ ಪರದೆಯನ್ನು ಕತ್ತರಿಸಿ ಹೊಲಿಯಲಾಗುತ್ತದೆ. ಮೂತ್ರ ವಿಸರ್ಜನೆಯಾಗಲು ಮತ್ತು ಮುಟ್ಟಿನ ರಕ್ತ ಹೋಗಲು ಒಂದು ಚಿಕ್ಕ ರಂಧ್ರವನ್ನಷ್ಟೇ ಉಳಿಸಲಾಗುತ್ತದೆ. ಈ ಆಚರಣೆಯ ಮೂಲಕ ಹೆಣ್ಣಿನ ಶೀಲವನ್ನು ಕಾಪಾಡುತ್ತೇವೆಂಬ ನಂಬಿರುವ ಮೂಢರು ಅನಾದಿ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಕೆಟ್ಟ ಪದ್ಧತಿ ಇಂಡೋನೇಷಿಯಾ, ಸೊಮಾಲಿಯಾ, ಇಥಿಯೋಪಿಯಾ, ನೈಜೀರಿಯಾ, ಲ್ಯಾಟಿನ್ ಅಮೆರಿಕ ಮುಂತಾದ ಕಡೆಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವುದು ಕಂಡುಬಂದಿದೆ.
ಭಗಾಂಕುರ ಎಂದರೇನು?:
ಎಫ್‌ಜಿಎಂ ಎಂದರೆ ಭಗಾಂಕುರ (ಕ್ಲಿಟರಿಸ್) ಕತ್ತರಿಸುವುದು. ಭಗಾಂಕುರ– ಹೆಣ್ಣಿನ ದೇಹದಲ್ಲಿ ಹೆಚ್ಚು ಸೂಕ್ಷ್ಮವಾದ ಅಂಗ. ಇದು ಸಂಭೋಗದಲ್ಲಿ ಲೈಂಗಿಕ ತೃಪ್ತಿ ಪಡೆಯಲು (ಆರ್ಗ್ಯಾಸಮ್) ಸಹಾಯಕವಾಗುವ ಅಂಗ. ಆಫ್ರಿಕಾದ ಅನೇಕ ರಾಷ್ಟ್ರಗಳಲ್ಲಿ ಪುಟ್ಟ ಬಾಲೆಯರ ಮೇಲೆ ಶಸ್ತ್ರಚಿಕಿತ್ಸೆ ನಡೆಸಿ ಭಗಾಂಕುರವನ್ನು ಕತ್ತರಿಸಲಾಗುತ್ತದೆ. ಭಗಾಂಕುರವಷ್ಟೇ ಅಲ್ಲ, ಹೆಣ್ಣಿನ ಜನನಾಂಗದ ಇತರ ಭಾಗಗಳಿಗೂ ಈ ಛೇದನ ಪ್ರಕ್ರಿಯೆ ವಿಸ್ತರಿಸಬಹುದು ಎಂದು ಹಲವಾರು ವೈದ್ಯಕೀಯ ಅಧ್ಯಯನಗಳು ಇದರ ಮೇಲೆ ಬೆಳಕು ಚೆಲ್ಲಿವೆ.
ಆಫ್ರಿಕಾದ ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆ ಬೇರೆ ರೀತಿಯ ಛೇದನ ಪ್ರಕ್ರಿಯೆಯನ್ನು ಸಂಪ್ರದಾಯದ ಹೆಸರಿನಲ್ಲಿ ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. ಇದು ತರುವಂತಹ ನೋವು ಅಪಾರ. ಮೂತ್ರವಿಸರ್ಜನೆಯ ವೇಳೆಯೂ ಕಾಣಿಸಿಕೊಳ್ಳುವ ಈ ನೋವು, ಮುಂದೆ ಸೋಂಕು, ಬಂಜೆತನ ಹಾಗೂ ಕೆಲವೊಮ್ಮೆ ಸಾವಿಗೂ ಕಾರಣವಾಗಬಹುದು.
ಈ ಪದ್ಧತಿ ಹಲವೆಡೆ ಇಂದಿಗೂ ಇದ್ದು, ಜಾಗತಿಕವಾಗಿ ಕನಿಷ್ಠ 20 ಕೋಟಿ ಜನ ಹುಡುಗಿಯರು ಮತ್ತು ಮಹಿಳೆಯರು ಜನನಾಂಗದ ಊನಗೊಳಿಸುವಿಕೆಯ ಎಫ್‌ಜಿಎಂನಂಥ ಆಚರಣೆಗೆ ಒಳಗಾಗಿದ್ದಾರೆ. ಪ್ರಸ್ತುತ ಇದೇ ಪ್ರವೃತ್ತಿ ಮುಂದುವರಿದರೆ 2030ರ ವೇಳೆಗೆ 1.5 ಕೋಟಿಗೂ ಹೆಚ್ಚು ಹುಡುಗಿಯರು ಈ ಆಚರಣೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಎಫ್‌ಜಿಎಂ ಹಿಂದಿನ ಉದ್ದೇಶವೇನು?
ಬಹುಮುಖ್ಯವಾಗಿ ಹೆಣ್ಣಿನ ಲೈಂಗಿಕತೆಯ ನಿಯಂತ್ರಣ. ಹೆಣ್ಣಿನ ಲೈಂಗಿಕ ಆಸಕ್ತಿಯನ್ನು ಕುಂದಿಸುವುದಕ್ಕಾಗಿ ಆಕೆಯ ನೈಸರ್ಗಿಕ ಸಂವೇದನೆಯನ್ನೇ ಹತ್ತಿಕ್ಕುವ ಉದ್ದೇಶ ಇಲ್ಲಿದೆ. ಇದು ಹೆಣ್ಣಿನ ಮೇಲೆ ಒಡೆತನ ಸಾಧಿಸುವ ಕ್ರೌರ್ಯದ ಪರಮಾವಧಿಯಾಗಿದೆ.
ಇದು ವಿವಾಹಪೂರ್ವ ಕನ್ಯತ್ವ ಮತ್ತು ವೈವಾಹಿಕ ನಿಷ್ಠೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಎಫ್‌ಜಿಎಂ ಮಾಡುವುದರಿಂದಾಗಿ ಅನೇಕ ಸಮುದಾಯಗಳಲ್ಲಿ ಮಹಿಳೆಯ ಕಾಮಾಸಕ್ತಿಯನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಇದು ವಿವಾಹೇತರ ಲೈಂಗಿಕ ಕ್ರಿಯೆಗಳನ್ನು ವಿರೋಧಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆದರೆ, ಯೋನಿ ತೆರೆಯುವಿಕೆಯನ್ನು ಮುಚ್ಚಿದಾಗ ಅಥವಾ ಹೊಲಿದಾಗ, ಲೈಂಗಿಕ ಸಂಭೋಗದಲ್ಲಿ ನೋವಿನ ಭಯ ಕಾಣಿಸಿಕೊಳ್ಳುತ್ತದೆ ಎಂಬ ಭಯ ಕಾಡುವುದರಿಂದ ವಿವಾಹೇತರ ಲೈಂಗಿಕ ಸಂಭೋಗವನ್ನು ಮತ್ತಷ್ಟು ನಿರುತ್ಸಾಹಗೊಳಿಸುತ್ತದೆ ಎಂಬುದು ತಿಳಿದುಬಂದಿದೆ.
ಧಾರ್ಮಿಕ ವಿದ್ವಾಂಸರು ಏನು ಹೇಳುತ್ತಾರೆ
ಕುರಾನ್, ಕುಟುಂಬದ ಸದಸ್ಯರ ಮೇಲೆ ಹಾನಿ ಮಾಡುವುದನ್ನು ನಿಷೇಧಿಸುತ್ತದೆ. ಕೆಲವು ಇಸ್ಲಾಮಿಕ್ ವಿದ್ವಾಂಸರು ಈ ನಿಷೇಧದಿಂದಾಗಿ ಎಫ್‌ಜಿಎಂ ಅನ್ನು ನಿಷೇಧಿಸಲಾಗಿದೆ ಎಂದು ವಾದಿಸಿದರೆ, ಸ್ತ್ರೀಯರ ವಿವಾಹ ಪೂರ್ವ ಲೈಂಗಿಕತೆಯನ್ನು ನಿಯಂತ್ರಿಸಲು ಮತ್ತು ಕುಟುಂಬದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಎಫ್‌ಜಿಎಂ ಅಗತ್ಯವೆಂದು ವಾದಿಸುತ್ತಾರೆ. ಹೀಗಾಗಿ, ಕೆಲವು ಇಸ್ಲಾಮಿಕ್ ವಿದ್ವಾಂಸರು ತಮ್ಮ ಕುಟುಂಬ ಸದಸ್ಯರ ಹಿತದೃಷ್ಟಿಯಿಂದ ಮಹಿಳೆ ಎಫ್‌ಜಿಎಂಗೆ ಒಳಗಾಗಬೇಕಾಗುತ್ತದೆ.
ನಂಬಿಕೆಗಳು ಮತ್ತು ಮೂಢನಂಬಿಕೆಗಳು
- ಮದುವೆಗಾಗಿ ಹುಡುಗಿಯ ಕನ್ಯತ್ವ 'ಉಳಿಸುವ ಉದ್ದೇಶ
- ಸ್ತ್ರೀ ಲೈಂಗಿಕತೆಯನ್ನು ನಿಯಂತ್ರಿಸುವುದು
- ಕುಟುಂಬ ಗೌರವ / ಸಾಮಾಜಿಕ ನಿರೀಕ್ಷೆಯ ಕಾರಣಗಳು
ಎಫ್‌ಜಿಎಂ ಹೇಗೆ ಹಾನಿಕಾರಕವಾಗಿದೆ?
ಎಫ್‌ಜಿಎಂ ಯಾವುದೇ ಆರೋಗ್ಯ ಪ್ರಯೋಜನಗಳನ್ನು ಹೊಂದಿಲ್ಲ. ಇದು ಹುಡುಗಿಯರು ಮತ್ತು ಮಹಿಳೆಯರಿಗೆ ಅನೇಕ ರೀತಿಯಲ್ಲಿ ಹಾನಿ ಮಾಡುತ್ತದೆ. ಇದು ಆರೋಗ್ಯಕರ ಮತ್ತು ಸಾಮಾನ್ಯ ಸ್ತ್ರೀ ಜನನಾಂಗದ ಅಂಗಾಂಶಗಳನ್ನು ತೆಗೆದುಹಾಕುವುದು ಮತ್ತು ಹಾನಿ ಮಾಡುವುದು ಮತ್ತು ಹುಡುಗಿಯರ ಮತ್ತು ಮಹಿಳೆಯರ ದೇಹದ ನೈಸರ್ಗಿಕ ಕಾರ್ಯಗಳಿಗೆ ಅಡ್ಡಿಪಡಿಸುತ್ತದೆ.
ಉದ್ಭವಿಸಬಹುದಾದ ಸಮಸ್ಯೆಗಳು:
- ತೀವ್ರ ನೋವು
- ಅತಿಯಾದ ರಕ್ತಸ್ರಾವ
- ಜನನಾಂಗದ ಸಮಸ್ಯೆ
- ಜ್ವರ
- ಮೂತ್ರದ ತೊಂದರೆಗಳು
- ಸುತ್ತಮುತ್ತಲಿನ ಜನನಾಂಗದ ಅಂಗಾಂಶಗಳಿಗೆ ಗಾಯ
- ಆಘಾತ
- ಸಾವು
ದೀರ್ಘಕಾಲೀನ ಪರಿಣಾಮಗಳು
- ಮೂತ್ರದ ತೊಂದರೆಗಳು ( ಮೂತ್ರ ವಿಸರ್ಜನೆ ವೇಳೆ ನೋವು, ಮೂತ್ರದ ಸೋಂಕು)
- ಯೋನಿ ಸಮಸ್ಯೆಗಳು ( ತುರಿಕೆ, ಬ್ಯಾಕ್ಟೀರಿಯಾ ಮತ್ತು ಇತರ ಸೋಂಕುಗಳು)
- ಮುಟ್ಟಿನ ತೊಂದರೆಗಳು ( ಮುಟ್ಟಿನ ವೇಳೆ ನೋವು, ಮುಟ್ಟಿನ ರಕ್ತ ಹೋಗುವಾಗ ತೊಂದರೆ, ಇತ್ಯಾದಿ)
- ಲೈಂಗಿಕ ಸಮಸ್ಯೆಗಳು (ಸಂಭೋಗದ ಸಮಯದಲ್ಲಿ ನೋವು, ತೃಪ್ತಿ ಕಡಿಮೆಯಾಗುವುದು ಇತ್ಯಾದಿ)
- ಹೆರಿಗೆ ಸಮಯ ಅಪಾಯ (ಕಷ್ಟದ ಹೆರಿಗೆ, ಅತಿಯಾದ ರಕ್ತಸ್ರಾವ, ಸಿಸೇರಿಯನ್, ಇತ್ಯಾದಿ) ಮತ್ತು ನವಜಾತ ಸಾವುಗಳು
ಶಸ್ತ್ರಚಿಕಿತ್ಸೆಗಳ ಅವಶ್ಯಕತೆ: ಲೈಂಗಿಕ ಸಂಭೋಗ ಮತ್ತು ಹೆರಿಗೆಗೆ (ಡಿನ್‌ಫಿಬ್ಯುಲೇಷನ್) ಸಮಯದಲ್ಲಿ ಯೋನಿಯ ಮೇಲ್ಪದರವನ್ನು ಕತ್ತರಿಸಬೇಕಾಗುತ್ತದೆ. ಕೆಲವೊಮ್ಮೆ ಜನನಾಂಗದ ಅಂಗಾಂಶವನ್ನು ಹೆರಿಗೆಯ ನಂತರವೂ ಸೇರಿದಂತೆ ಹಲವಾರು ಬಾರಿ ಮತ್ತೆ ಹೊಲಿಯಲಾಗುತ್ತದೆ. ಹೀಗೆ ಅಗತ್ಯಕ್ಕೆ ತಕ್ಕಂತೆ ಆಕೆಯ ಅಂಗಾಂಗವನ್ನು ಹೊಲಿಯುವ ಮತ್ತು ಕತ್ತರಿಸು ಕ್ರೌರ್ಯ ನಡೆಯುತ್ತದೆ. ಇದರಿಂದಾಗಿ ಮಾನಸಿಕ ತೊಂದರೆಗಳಾದ ಖಿನ್ನತೆ, ಆತಂಕ, ನಂತರದ ಆಘಾತಕಾರಿ ಒತ್ತಡದ ಕಾಯಿಲೆಗಳು ಸಂಭವಿಸಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ.
ಭಾರತದಲ್ಲಿ ಎಫ್‌ಜಿಎಂ ಆಚರಣೆ:ಸ್ತ್ರೀ ಜನನಾಂಗದ ಛೇದನ ಅಥವಾ ಕತ್ತರಿಸುವುದು (ಎಫ್‌ಜಿಎಂ) ಇದು ಭಾರತದಲ್ಲಿಯೂ ಚಾಲ್ತಿಯಲ್ಲಿದೆ. ದೇಶದಲ್ಲಿ ಇದನ್ನು “ಖಟ್ನಾ” ಅಥವಾ “ಖಫ್ಜ್” ಎಂದು ಕರೆಯಲಾಗುತ್ತದೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಕೇರಳದಲ್ಲಿ ವಾಸಿಸುವ ಬೊಹ್ರಾ ಸಮುದಾಯದಲ್ಲಿ ಈ ಪದ್ಧತಿ ಸಾಮಾನ್ಯವಾಗಿದೆ. ಬೊಹ್ರಾ ಸಮುದಾಯವು ಭಾರತದಲ್ಲಿ ಒಂದು ಮಿಲಿಯನ್ ಪ್ರಬಲವಾಗಿದೆ ಎಂದು ಅಂದಾಜಿಸಲಾಗಿದೆ. ಅನೇಕರು ಭಾರತದ ಹೊರಗೂ ವಾಸಿಸುತ್ತಿದ್ದಾರೆ.
2018 ರಲ್ಲಿ, 'ವಿ ಸ್ಫಿಕ್ ಔಟ್' ನಡೆಸಿದ ಸಮೀಕ್ಷೆಯಲ್ಲಿ, ಬೋಹ್ರಾ ಸಮುದಾಯದಲ್ಲಿ ಈ ಪದ್ದತಿ ಕಂಡುಬಂದಿದೆ. ಸಮೀಕ್ಷೆ ವೇಳೆ ಪ್ರತಿಕ್ರಿಯಿಸಿದ ಎಲ್ಲ 75% ಹೆಣ್ಣುಮಕ್ಕಳು (ಏಳು ವರ್ಷ ಮತ್ತು ಮೇಲ್ಪಟ್ಟವರು) ಎಂದು ಬಹಿರಂಗವಾಗಿದೆ. ಇದರಲ್ಲಿ ಸುಮಾರು 33% ಮಹಿಳೆಯರು ಎಫ್‌ಜಿಎಂಯಿಂದಾಗಿ ತಮ್ಮ ಲೈಂಗಿಕ ಜೀವನದ ಮೇಲೆ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅನೇಕರು ನೋವಿನ ಮೂತ್ರ ವಿಸರ್ಜನೆ, ದೈಹಿಕ ಅಸ್ವಸ್ಥತೆ, ನಡೆಯಲು ತೊಂದರೆ, ಮತ್ತು ಸಂಬೋಗ ನಡೆಸಿದ ತಕ್ಷಣ ರಕ್ತಸ್ರಾವವನ್ನು ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ಈ ಪದ್ದತಿಯ ವಿರುದ್ದ ತೆಗೆದುಕೊಂಡ ಕ್ರಮಗಳೇನು?
- ಭಾರತದಲ್ಲಿ ಎಫ್‌ಜಿಎಂ / ಖಾಫ್ಜ್ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರುವಲ್ಲಿ ಇತ್ತೀಚೆಗೆ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ.
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿದ್ದ ಶ್ರೀಮತಿ ಮೇನಕಾ ಗಾಂಧಿ ಅವರು ಎಫ್‌ಜಿಎಂ / ಖಾಫ್ಜ್ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಅಪರಾಧ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ಪದ್ದತಿಯನ್ನು ಕೊನೆಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಬೋಹ್ರಾ ಸಮುದಾಯದ ಧಾರ್ಮಿಕ ಮುಖ್ಯಸ್ಥರನ್ನು ಕೇಳಿಕೊಂಡಿದ್ದಾರೆ.
- ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣವೊಂದರಲ್ಲಿ, ನ್ಯಾಯಪೀಠದ ನ್ಯಾಯಾಧೀಶರು ಎಫ್‌ಜಿಎಂ / ಖಾಫ್ಜ್ ಪ್ರೈಮಾ ಫೇಸಿ ಸಂವಿಧಾನವು ಖಾತರಿಪಡಿಸಿದ ಗೌಪ್ಯತೆ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಎಫ್‌ಜಿಎಂ / ಖಾಫ್ಜ್ ಅಭ್ಯಾಸಕ್ಕೆ ಯಾವುದೇ ವೈಜ್ಞಾನಿಕ ಅಥವಾ ವೈದ್ಯಕೀಯ ಆಧಾರಗಳಿಲ್ಲ ಎಂದು ಕೋರ್ಟ್ ಗಮನಿಸಿದೆ.
- ಈ ಪದ್ದತಿಯ ವಿರುದ್ದ 2015 ರಲ್ಲಿ ಸುಮಾರು 17 ಬೋಹ್ರಾ ಮಹಿಳೆಯರು ಅರ್ಜಿ ಚಳುವಳಿಯನ್ನು ಪ್ರಾರಂಭಿಸಿದರು. ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಸಹಿಗಳನ್ನು ಸಂಗ್ರಹಿಸಲಾಗಿದ್ದು, ಇದು ಭಾರತದಲ್ಲಿ ನಿಷೇಧಕ್ಕೆ ಒತ್ತಾಯಿಸಿದೆ.
ಏನು ಮಾಡಬೇಕು?
- ಭಾರತದಲ್ಲಿ ಎಫ್‌ಜಿಎಂ ಅಸ್ತಿತ್ವದಲ್ಲಿದೆ ಎಂಬ ಅಂಶವನ್ನು ಭಾರತ ಸರ್ಕಾರ ಮತ್ತು ನ್ಯಾಯಾಂಗ ಅಂಗೀಕರಿಸಬೇಕಾಗಿದೆ.
- ಎಫ್‌ಜಿಎಂ ಅನ್ನು ನಿಷೇಧಿಸುವ ಶಾಸನವನ್ನು ಮುಂದೆ ತರಬೇಕಾಗಿದೆ.
- ಈ ಪದ್ದತಿಯಿಂದಾಗುವ ಅನಾಹುತದ ಬಗ್ಗೆ ಮಹಿಳೆಯರಿಗೆ ಶಿಕ್ಷಣ ನೀಡುವ ಅಗತ್ಯತೆ.
- ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾನೂನುಗಳು ಮತ್ತು ರಾಜಕೀಯ ಬದ್ಧತೆ.