ಹೈದರಾಬಾದ್: ಅಂಗವಿಕಲರು ತಮ್ಮ ಬಲಹೀನತೆಯನ್ನು ಮೆಟ್ಟುನಿಂತು ಇಂದು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯವೇನು ಸಾಬೀತುಪಡಿಸುತ್ತಿದ್ದಾರೆ. ತಮ್ಮ ಬಗ್ಗೆ ಸಮಾಜದಲ್ಲಿರುವ ಇರುವ ಕೀಳರಿಮೆ ಹೋಗಲಾಡಿಸಿ ಸ್ವಾಭಿಮಾನದಿಂದ ಬದುಕುತ್ತಿರುವ ಅದೆಷ್ಟೋ ಉದಾಹರಣೆಗಳು ಕಣ್ಣಮುಂದಿವೆ.
ವಿಕಲಾಂಗ ವ್ಯಕ್ತಿಗಳ ಅಂತಾರಾಷ್ಟ್ರೀಯ ದಿನವನ್ನು ಪ್ರತಿ ವರ್ಷ ಡಿಸೆಂಬರ್ 3 ರಂದು ಆಚರಿಸಲಾಗುತ್ತದೆ. 'ಕೋವಿಡ್-19 ನಂತರದ ಜಗತ್ತನ್ನು ಒಳಗೊಳ್ಳುವ, ಪ್ರವೇಶಿಸಬಹುದಾದ ಹಾಗೂ ಸಮರ್ಥನೀಯವಾಗಿಸಲು ವಿಕಲಾಂಗ ವ್ಯಕ್ತಿಗಳ ನಾಯಕತ್ವ, ಭಾಗವಹಿಸುವಿಕೆ' ಈ ವರ್ಷದ ವಿಷಯವಾಗಿದೆ.
ಸಮಾಜ ಮತ್ತು ಅಭಿವೃದ್ಧಿಯ ಎಲ್ಲ ಕ್ಷೇತ್ರಗಳಲ್ಲಿ ವಿಕಲಾಂಗ ವ್ಯಕ್ತಿಗಳ ಹಕ್ಕುಗಳು ಮತ್ತು ಯೋಗಕ್ಷೇಮ ಉತ್ತೇಜಿಸುವ ಗುರಿಯನ್ನು ಹೊಂದಲಾಗಿದ್ದು, ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದ ಪ್ರತಿಯೊಂದು ಹಂತದಲ್ಲೂ ವಿಕಲಾಂಗ ವ್ಯಕ್ತಿಗಳಿಗೆ ಪರಿಸ್ಥಿತಿಯ ಅರಿವು ಮೂಡಸಲಾಗುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಜಗತ್ತಿನಲ್ಲಿಂದು 7 ಶತಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯಿದೆ. ಇದರಲ್ಲಿ ಒಂದು ಶತಕೋಟಿಗಿಂತ ಹೆಚ್ಚು ಅಥವಾ ಪ್ರಪಂಚದ ಜನಸಂಖ್ಯೆಯ ಸರಿಸುಮಾರು ಶೇ.15 ರಷ್ಟು ಜನರು ಕೆಲವು ರೀತಿಯ ಅಂಗವೈಕಲ್ಯದೊಂದಿಗೆ ಬದುಕುತ್ತಿದ್ದಾರೆ. ಶೇ.80 ರಷ್ಟು ಜನರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಯುಎನ್ ಉಲ್ಲೇಖಿಸಿದೆ.
ವಿಕಲಾಂಗ ವ್ಯಕ್ತಿಗಳು ಸಮಾಜದ ಒಂದು ಭಾಗ..
ನಮ್ಮ ಸಮಾಜದಲ್ಲಿ ಇಂದಿಗೂ ಅಂಗವಿಕಲರ ವಿರುದ್ಧ ತಾರತಮ್ಯ, ಅನುಕಂಪ, ಅಪಹಾಸ್ಯ ಮಾಡುತ್ತಿರುವುದು ದುರಾದೃಷ್ಟಕರ. ಆದರೆ, ಅವರೂ ನಮ್ಮ ಸಮಾಜದ ಭಾಗವಾಗಿದ್ದಾರೆ. ಅವರನ್ನು ಸಮಾನವಾಗಿ ಪರಿಗಣಿಸಬೇಕು ಎಂಬುದನ್ನು ನಾವು ಸಾಮಾನ್ಯವಾಗಿ ಒಪ್ಪಿಕೊಳ್ಳಲು ವಿಫಲರಾಗುತ್ತೇವೆ.