ನವದೆಹಲಿ:ನವೆಂಬರ್ 20 ವಿಶ್ವ ಮಕ್ಕಳ ಹಕ್ಕುಗಳ ದಿನಾಚರಣೆ. ಜಗತ್ತಿನಾದ್ಯಂತ ಇದನ್ನು ಆಚರಣೆ ಮಾಡಲಾಗುತ್ತೆ. ಮಕ್ಕಳ ಯೋಗಕ್ಷೇಮ ಮತ್ತು ಕಲ್ಯಾಣ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಕ್ಕಳ ನಡುವೆ ಒಡನಾಟ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವಂತೆ ಉತ್ತೇಜಿಸುವುದು ಈ ದಿನದ ಉದ್ದೇಶ.
ಮಕ್ಕಳಿಗಿರುವ ಹಕ್ಕುಗಳೇನು?
ಇಲ್ಲಿ ಮಕ್ಕಳೆಂದರೆ ಸಾಮಾನ್ಯ ಸಾಮಾನ್ಯವಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ವ್ಯಾಖ್ಯಾನಿಸಲಾಗುತ್ತದೆ. ಮಕ್ಕಳ ಹಕ್ಕುಗಳೆಂದರೆ ಮಾನವ ಹಕ್ಕುಗಳು, ಇದು ಅಪ್ರಾಪ್ತರ ಆರೈಕೆ ಮತ್ತು ರಕ್ಷಣೆಯ ವಿಶೇಷ ಅಗತ್ಯಗಳನ್ನು ಸಹ ಗುರುತಿಸುತ್ತದೆ.
ಮಕ್ಕಳ ಹಕ್ಕುಗಳ ಕುರಿತಾದ ಅಂತಾರಾಷ್ಟ್ರೀಯ ಒಪ್ಪಂದಗಳು, ಎಲ್ಲಾ ಮಕ್ಕಳು ಶಾಂತಿ, ಘನತೆ, ಸಹನೆ, ಸ್ವಾತಂತ್ರ್ಯ, ಸಮಾನತೆ ಮತ್ತು ಒಗ್ಗಟ್ಟಿನ ಮನೋಭಾವದಿಂದ ಬೆಳೆಯಬೇಕು ಎಂದು ಹೇಳುತ್ತವೆ. ಆಧುನಿಕ ಜಗತ್ತಿನಲ್ಲಿ, ಈ ಸಿದ್ಧಾಂತಗಳು ಪ್ರತಿ ದೇಶದ ಶಿಕ್ಷಣ, ಆರೋಗ್ಯ, ಕಾನೂನು ಮತ್ತು ಸಾಮಾಜಿಕ ಸೇವೆಗಳ ವ್ಯವಸ್ಥೆಯನ್ನು ನಿರ್ದೇಶಿಸುತ್ತವೆ. ದುರದೃಷ್ಟವಶಾತ್ ಇದು ಇನ್ನೂ ಸಾಧ್ಯವಾಗಿಲ್ಲ.
ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತ ಸತ್ಯ ಸಂಗತಿ:
- 2015ರಲ್ಲಿ 2 ರಿಂದ 17 ವರ್ಷ ವಯಸ್ಸಿನ ಸುಮಾರು 1 ಬಿಲಿಯನ್ ( 100 ಕೋಟಿ) ಮಕ್ಕಳು ದೈಹಿಕ, ಲೈಂಗಿಕ ಅಥವಾ ಮಾನಸಿಕ ಹಿಂಸೆ ಅಥವಾ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
- 152 ಮಿಲಿಯನ್ (15 ಕೋಟಿ 20 ಲಕ್ಷ ) ಮಕ್ಕಳು ಬಾಲ ಕಾರ್ಮಿಕ ಪದ್ಧತಿಯಲ್ಲಿ ದುಡಿಯುತ್ತಿದ್ದಾರೆ. 73 ಮಿಲಿಯನ್( 7 ಕೋಟಿ 30 ಲಕ್ಷ) ಅಪಾಯಕಾರಿ ಉದ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
- ಕಡಿಮೆ - ಅಭಿವೃದ್ಧಿ ಹೊಂದಿದ 47 ದೇಶಗಳಲ್ಲಿ ಶೇ 41ರಷ್ಟು ಬಾಲಕಿಯರು 18 ವರ್ಷಕ್ಕಿಂತ ಮೊದಲೇ ಬಾಲ್ಯವಿವಾಹಕ್ಕೊಳಗಾಗಿದ್ದಾರೆ.
- ವಿಶ್ವ ಬ್ಯಾಂಕ್ ನಡೆಸಿದ ಅಧ್ಯಯನವೊಂದು ಪ್ರತಿ 10 ಮಕ್ಕಳಲ್ಲಿ ಮೂವರು ವಿಶೇಷ ಚೇತನ ಮಕ್ಕಳು ಎಂದಿಗೂ ಶಾಲೆಯ ಮುಖವನ್ನೇ ನೋಡಿಲ್ಲ ಎಂದು ವರದಿ ನೀಡಿದೆ.
- 200 ಮಿಲಿಯನ್ ಮಹಿಳೆಯರು ಮತ್ತು ಯುವತಿಯರು ಸಾಂಪ್ರದಾಯಿಕ ಕಾರಣಗಳು ಮತ್ತು ವೈದ್ಯಕೀಯೇತರ ಕಾರಣಗಳಿಂದಾಗಿ ತಮ್ಮ ಗರ್ಭಕೋಶವನ್ನೇ ಕಳೆದುಕೊಂಡಿದ್ದಾರೆ.
- ಅಂಗವಿಕಲ ಮಕ್ಕಳು ದೈಹಿಕ ಅಥವಾ ಲೈಂಗಿಕ ದೌರ್ಜನ್ಯವನ್ನು ಅನುಭವಿಸುವ ಸಾಧ್ಯತೆ ಸುಮಾರು ನಾಲ್ಕು ಪಟ್ಟು ಹೆಚ್ಚು.
- ಗಂಡು ಸಂತಾನದ ಮೇಲಿನ ವ್ಯಾಮೋಹ ಮತ್ತು ಭ್ರೂಣ ಲಿಂಗ ಪತ್ತೆಯಿಂದಾಗಿ ವಿಶ್ವದಾದ್ಯಂತ ಸುಮಾರು 126 ಮಿಲಿಯನ್ ಹೆಣ್ಣು ಮಕ್ಕಳು ಪ್ರಪಂಚಕ್ಕೆ ಕಾಲಿಡುವ ಮೊದಲೇ ಗರ್ಭದಲ್ಲೇ ಕಣ್ಮರೆಯಾಗಿವೆ.
ವಿಶ್ವ ಮಕ್ಕಳ ಹಕ್ಕುಗಳ ದಿನದ ಮಹತ್ವ:
- ಇಂದಿನ ಮಕ್ಕಳೇ ದೇಶದ ಭವಿಷ್ಯ ಹೀಗಾಗಿ ಈ ದಿನ ಅವರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ.
- ಜಾಗತಿಕವಾಗಿ ಇಂದಿನ ಮಕ್ಕಳು ನಿಜವಾಗಿ ಎದುರಿಸುತ್ತಿರುವುದೇನು? ಎಂಬುದರ ಕುರಿತು ಈ ದಿನ ಜಾಗೃತಿ ಮೂಡಿಸುತ್ತದೆ. ಪ್ರಪಂಚಾದ್ಯಂತ ಶಿಕ್ಷಣ, ಆರೋಗ್ಯ ಸೇವೆ ಅಥವಾ ಅವಕಾಶಗಳಿಂದ ವಂಚಿತರಾದ ಲಕ್ಷಾಂತರ ಮಕ್ಕಳಿದ್ದಾರೆ.
- ಮಕ್ಕಳ ಹಕ್ಕುಗಳ ಮಾನ್ಯತೆಗಾಗಿ 1989 ರಲ್ಲಿ ವಿಶ್ವಸಂಸ್ಥೆಯಲ್ಲಿ ನಡೆದ ಸಮಾವೇಶದಲ್ಲಿ ನವೆಂಬರ್ 20 ಅನ್ನು ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸುವಂತೆ ಅಂಗೀಕರಿಸಿತು. ಈ ಸಮಾವೇಶ ಈ ದಿನದ ಮಹತ್ವ ಕುರಿತು ಬೆಳಕು ಚೆಲ್ಲುತ್ತದೆ.
- ತಮ್ಮ ಹಕ್ಕುಗಳಿಂದ ವಂಚಿತರಾಗಿರುವ ಮಕ್ಕಳಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಈ ವಿಶ್ವ ಮಕ್ಕಳ ದಿನದ ಪ್ರಮುಖ ಗುರಿಗಳಲ್ಲಿ ಒಂದಾಗಿದೆ.
- ಮಕ್ಕಳ ಹಕ್ಕುಗಳ ಬಗ್ಗೆ ನಡೆದ ವಿಶ್ವಸಂಸ್ಥೆಯ ಸಮಾವೇಶದಲ್ಲಿ ಅಂಗೀಕೃತಗೊಂಡ - ''ಎಲ್ಲ ಮಕ್ಕಳು ಮೂಲ ಹಕ್ಕುಗಳೊಂದಿಗೆ ಜನಿಸುತ್ತಾರೆ ''ಎಂಬುದನ್ನು 1992 ರಲ್ಲಿ ಭಾರತವು ಅಂಗೀಕರಿಸಿತು .
ಬದುಕುವ ಹಕ್ಕು: ಜೀವನ, ಆರೋಗ್ಯ, ಪೋಷಣೆ, ಹೆಸರು, ರಾಷ್ಟ್ರೀಯತೆ ಪಡೆಯುವ ಹಕ್ಕು
ಅಭಿವೃದ್ಧಿ ಹಕ್ಕು:ಶಿಕ್ಷಣ, ಪೋಷಣೆ, ವಿರಾಮ, ಮನರಂಜನೆ, ಸಾಂಸ್ಕೃತಿಕ ಚಟುವಟಿಕೆಗಳು
ರಕ್ಷಣೆಯ ಹಕ್ಕು: ಶೋಷಣೆ, ನಿಂದನೆ, ನಿರ್ಲಕ್ಷ್ಯದಿಂದ ರಕ್ಷಿಸಿಕೊಳ್ಳುವ ಹಕ್ಕು