ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸೇರಿ ಸರ್ಕಾರಿ ಖಜಾನೆಯನ್ನೇ ಲೂಟಿ ಹೊಡೆಯುವಂತಹ ಕೆಲಸ ಮಾಡುತ್ತಲಿರುವರು. ಜನರಲ್ಲಿ ಜಾಗೃತಿ ಮೂಡಿ ಭ್ರಷ್ಟಾಚಾರದ ವಿರುದ್ಧ ಹಲವಾರು ಆಂದೋಲನಗಳು ನಡೆಯುತ್ತಲಿದ್ದರೂ ಭ್ರಷ್ಟಾಚಾರ ಮಾತ್ರ ಕಡಿಮೆ ಆಗುತ್ತಿಲ್ಲ.
ಶಿಕ್ಷಣ, ಆರೋಗ್ಯ, ಕ್ರೀಡೆ, ರಾಜಕೀಯ, ನ್ಯಾಯ, ದೇಶದ ಅಭಿವೃದ್ಧಿ ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರ ಆಳವಾಗಿ ಬೇರೂರಿದೆ. ಇದರಿಂದ ಉಂಟಾಗುವ ಸಮಸ್ಯೆಗಳು ಗಂಭೀರವಾಗಿವೆ. ಪ್ರಜಾಪ್ರಭುತ್ವ, ಸಮಾಜದ ಭದ್ರತೆ, ನೈತಿಕ ಮೌಲ್ಯ, ನ್ಯಾಯ ಸಂಸ್ಥೆಯ ಮೌಲ್ಯಗಳನ್ನು ಭ್ರಷ್ಟಾಚಾರ ಎಂಬ ಪಿಡುಗು ದುರ್ಬಲಗೊಳಿಸುತ್ತಿದೆ.
ಡಿಸೆಂಬರ್ 9ರಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನಾಗಿ ಆಚರಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಅಕ್ಟೋಬರ್ 31, 2003ರಲ್ಲಿ ಪ್ರಸ್ತಾವ ಮಂಡಿಸಲಾಯಿತು. ಭ್ರಷ್ಟಾಚಾರ ವಿರುದ್ಧ ಜಾಗೃತಿ ಮತ್ತು ಅದರ ವಿರುದ್ಧ ಹೋರಾಟ ಹಾಗೂ ತಡೆ ಇದರ ಪ್ರಮುಖ ಉದ್ದೇಶವಾಗಿದೆ. 2005ರ ಬಳಿಕ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು.
ಮ್ಲೋಂಡಿ ಕ್ಯಾಲುಜಾ ಅವರ ಜನ್ಮದಿನದಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಆಚರಿಸಲಾಗುತ್ತಿದೆ. ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲು, ಇದನ್ನು ಎದುರಿಸಲು ಮತ್ತು ತಡೆಗಟ್ಟಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಕ್ಟೋಬರ್ 9, 2003ರಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವ ಪ್ರಾರಂಭಿಸಿತು.
ಹಿನ್ನೆಲೆ :ಭ್ರಷ್ಟಾಚಾರವು ಜಗತ್ತಿನ ಎಲ್ಲ ದೇಶಗಳ ಮೇಲೆ ಪರಿಣಾಮ ಬೀರಿರುವ ವಿಷಯವಾಗಿದೆ. ಅಧಿಕಾರ ಅಥವಾ ನಂಬಿಕೆಯ ಸ್ಥಾನವನ್ನು ಅಪ್ರಾಮಾಣಿಕ ಲಾಭಕ್ಕಾಗಿ ಬಳಸುವವರನ್ನು ಇದು ಸೂಚಿಸುತ್ತದೆ. ಭ್ರಷ್ಟಾಚಾರವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಅಸ್ಥಿರ ಸರ್ಕಾರಗಳನ್ನು ಸೃಷ್ಟಿಸುತ್ತದೆ ಮತ್ತು ದೇಶಗಳನ್ನು ಆರ್ಥಿಕವಾಗಿ ಹಿಮ್ಮೆಟ್ಟಿಸುತ್ತದೆ.
ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದಂದು ರಾಜಕೀಯ ಮುಖಂಡರು, ಸರ್ಕಾರಗಳು, ಕಾನೂನು ಸಂಸ್ಥೆಗಳು ಮತ್ತು ಲಾಬಿ ಗುಂಪುಗಳು ಭ್ರಷ್ಟಾಚಾರದ ವಿರುದ್ಧ ಒಟ್ಟಾಗಿ ಕೆಲಸ ಮಾಡುವ ದಿನವಾಗಿದೆ.
ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದ ಮಹತ್ವ :ಪ್ರತಿವರ್ಷ 1,00,000 ಕೋಟಿ ರೂ. ಲಂಚವಾಗಿ ನೀಡಲಾಗುತ್ತಿದೆ. ಇದು ಜಾಗತಿಕ ಜಿಡಿಪಿಯ ಶೇ.5 ಕ್ಕಿಂತ ಹೆಚ್ಚು ಮೊತ್ತಕ್ಕೆ ಸಮಾನವಾಗಿರುತ್ತದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಪ್ರಕಾರ, ಭ್ರಷ್ಟಾಚಾರಕ್ಕಾಗಿ ನೀಡಿದ ಹಣವನ್ನು ಅಭಿವೃದ್ಧಿಗೆ 10 ಪಟ್ಟು ಬಳಸಿಕೊಳ್ಳಬಹುದಾಗಿದೆ ಎಂದು ಅಂದಾಜಿಸಲಾಗಿದೆ.
ಭ್ರಷ್ಟಾಚಾರವು ಎಲ್ಲಾ ಸಮಾಜಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ. ಯಾವುದೇ ದೇಶ, ಪ್ರದೇಶ ಅಥವಾ ಸಮುದಾಯವು ಇದರಿಂದ ಹೊರತಾಗಿಲ್ಲ. ಈ ಲಂಚ ಎಂಬ ಪಿಡುಗಿನಿಂದ ಆರ್ಥಿಕ ಅಭಿವೃದ್ಧಿಯು ಕುಂಠಿತಗೊಂಡಿದೆ. ಯಾಕೆಂದರೆ, ವಿದೇಶಿ ಹೂಡಿಕೆ ನಿರುತ್ಸಾಹಗೊಂಡಿದೆ ಮತ್ತು ದೇಶದೊಳಗಿನ ಸಣ್ಣ ಉದ್ಯಮಗಳು ಭ್ರಷ್ಟಾಚಾರದ ಕಾರಣದಿಂದಾಗಿ ಅಗತ್ಯವಿರುವ ಹಣ ಪಡೆದುಕೊಳ್ಳುವಲ್ಲಿ ವಿಫಲವಾಗಿವೆ.
ಇದರ ವಿರುದ್ಧ ಹೋರಾಡಲು ಸರ್ಕಾರಗಳು, ಖಾಸಗಿ ವಲಯ, ಸರ್ಕಾರೇತರ ಸಂಸ್ಥೆಗಳು, ಮಾಧ್ಯಮಗಳು ಮತ್ತು ವಿಶ್ವದಾದ್ಯಂತದ ನಾಗರಿಕರು ಮುಂದಾಗುತ್ತಿದ್ದಾರೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಮತ್ತು ಯುನೈಟೆಡ್ ನೇಷನ್ಸ್ ಡ್ರಗ್ಸ್ ಅಂಡ್ ಕ್ರೈಮ್ ಆಫೀಸ್ (ಯುಎನ್‌ಒಡಿಸಿ) ಈ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿವೆ.
ಯಾವ ಯಾವ ದೇಶ ಭ್ರಷ್ಟಾಚಾರದಲ್ಲಿ ಯಾವ ಸ್ಥಾನದಲ್ಲಿವೆ :2019ರ ವರದಿಯ ಪ್ರಕಾರ ಡೆನ್ಮಾರ್ಕ್ ಪ್ರಥಮ ಸ್ಥಾನದಲ್ಲಿದ್ದು, ನ್ಯೂಜಿಲ್ಯಾಂಡ್ ಎರಡನೇ ಸ್ಥಾನ, ಯುಕೆ 12, ಯುಎಸ್ 23, ಭಾರತ 80, ಚೀನಾ 80, ಬ್ರೆಜಿಲ್ 106, ಪಾಕಿಸ್ತಾನ 120, ರಷ್ಯಾ 137, ಬಾಂಗ್ಲಾದೇಶ 146, ಸೋಮಾಲಿಯಾ 180ನೇ ಸ್ಥಾನದಲ್ಲಿದೆ.
ಭಾರತದಲ್ಲಿ ಭ್ರಷ್ಟಾಚಾರ :ಇದರ ಉಗಮ ಮತ್ತು ಅದರ ಸ್ವರೂಪದ ಬಗ್ಗೆ ಗಮನ ಹರಿಸುವುದು ಅಗತ್ಯ. ಇತರೆ ದೇಶಗಳಂತೆ ಭಾರತದಲ್ಲೂ ಭ್ರಷ್ಟಾಚಾರಕ್ಕೆ ತನ್ನದೇ ಆದ ಇತಿಹಾಸವಿದೆ. ಭ್ರಷ್ಟಾಚಾರವೆಂಬ ಸಾಮಾಜಿಕ ಪಿಡುಗು ಇಂದು ನಿನ್ನೆಯದಲ್ಲ. ಸಾವಿರಾರು ವರ್ಷಗಳ ಹಿಂದೆಯೇ ಭ್ರಷ್ಟಾಚಾರ ಈ ದೇಶವನ್ನು ಮಾತ್ರವಲ್ಲ, ಇಡೀ ವಿಶ್ವವನ್ನೇ ಸುತ್ತುವರಿದಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ.
ಇತ್ತೀಚಿನ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಭ್ರಷ್ಟಾಚಾರ ಪಟ್ಟಿಯಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ. ಅಲ್ಲಿ ಶೇ.78ರಷ್ಟು ಜನರು ಕೆಲಸ ಮಾಡಲು ಲಂಚ ಪಾವತಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಪೈಕಿ 22 ಪ್ರತಿಶತದಷ್ಟು ಜನರು ಹಲವಾರು ಬಾರಿ (ನೇರವಾಗಿ ಅಥವಾ ಪರೋಕ್ಷವಾಗಿ) ಲಂಚ ನೀಡಿದ್ರೆ, 56 ಪ್ರತಿಶತ ಅಧಿಕಾರಿಗಳು ಒಮ್ಮೆ ಅಥವಾ ಎರಡು ಬಾರಿ (ನೇರವಾಗಿ ಅಥವಾ ಪರೋಕ್ಷವಾಗಿ) ಲಂಚ ನೀಡುತ್ತಿದ್ದಾರೆ.
ಜಾರ್ಖಂಡ್, ಯುಪಿಗಳು ಮೂರನೇ ಸ್ಥಾನ ಹಂಚಿಕೊಂಡಿವೆ. ಅಲ್ಲಿ ಶೇ.74ರಷ್ಟು ನಾಗರಿಕರು ತಮ್ಮ ಕೆಲಸ ಮಾಡಿಕೊಳ್ಳಲು ಲಂಚ ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.74ರಷ್ಟು ನಾಗರಿಕರು ತಮ್ಮ ಕೆಲಸಗಳನ್ನು ಮಾಡಲು ಲಂಚ ಪಾವತಿಸುವುದನ್ನು ಒಪ್ಪಿದ್ದಾರೆ. ಅವರೆಲ್ಲರೂ ಹಲವಾರು ಬಾರಿ (ನೇರವಾಗಿ ಅಥವಾ ಪರೋಕ್ಷವಾಗಿ) ಪಾವತಿಸಿದ್ದಾರೆ. ಆದರೆ, ಶೇ.13 ರಷ್ಟು ಜನರು ಲಂಚ ನೀಡದೆ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
'ಭಾರತದ ಅತ್ಯಂತ ಭ್ರಷ್ಟ ರಾಜ್ಯಗಳ' ಪಟ್ಟಿಯಲ್ಲಿತೆಲಂಗಾಣ 5ನೇಸ್ಥಾನ ಪಡೆದಿದೆ. ಸರಿ ಸುಮಾರು 67 ಪ್ರತಿಶತದಷ್ಟು ನಾಗರಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಲಂಚ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪಟ್ಟಿಯಲ್ಲಿ ಪಂಜಾಬ್ 6ನೇ ಸ್ಥಾನದಲ್ಲಿದೆ. ಪಂಜಾಬ್ನಲ್ಲಿ ಶೇ.63ರಷ್ಟು ನಾಗರಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಲಂಚ ನೀಡುತ್ತಿದ್ದಾರೆ. ಇವರಲ್ಲಿ ಶೇ. 27ರಷ್ಟು ಜನರು ಹಲವಾರು ಬಾರಿ ಲಂಚ ನೀಡಿದ್ರೆ, ಶೇ.36ರಷ್ಟು ಜನ ಒಮ್ಮೆ ಅಥವಾ ಎರಡು ಬಾರಿ ಲಂಚ ನೀಡಿದ್ದಾರೆ. ಶೇ.27ರಷ್ಟು ಜನರು ಯಾವುದೇ ಹಣ ನೀಡದೆ ತಮ್ಮ ಕೆಲಸ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು 63 ಪ್ರತಿಶತದಷ್ಟು ನಿವಾಸಿಗಳು ಅಧಿಕೃತ ಕೆಲಸ ಮಾಡಲು ಲಂಚ ಪಾವತಿಸಲು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಶೇ.35ರಷ್ಟು ಜನರು ಹಲವಾರು ಬಾರಿ ಲಂಚ ನೀಡಬೇಕಾಗಿದ್ರೆ, 28 ಪ್ರತಿಶತದಷ್ಟು ಜನರು ಕೇವಲ ಒಂದು ಅಥವಾ ಎರಡು ಬಾರಿ ಲಂಚ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಶೇ.9ರಷ್ಟು ಜನರು ಲಂಚ ನೀಡದೆ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಭಾರತ ಭ್ರಷ್ಟಾಚಾರ ಸಮೀಕ್ಷೆ 2019ರ ಪ್ರಕಾರ ತಮಿಳುನಾಡು ಅತ್ಯಂತ ಭ್ರಷ್ಟ ರಾಜ್ಯಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಸುಮಾರು 62 ಪ್ರತಿಶತ ನಾಗರಿಕರು ತಮ್ಮ ಕೆಲಸ ಮಾಡಲು ಲಂಚ ಕೊಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಸುಮಾರು 35 ಪ್ರತಿಶತದಷ್ಟು ಜನರು ಹಲವಾರು ಬಾರಿ ಲಂಚ ನೀಡಬೇಕಾಗಿದೆ ಎಂದು ತಿಳಿದು ಬಂದಿದೆ.
27 ಪ್ರತಿಶತದಷ್ಟು ಜನರು ಕೇವಲ ಒಂದು ಅಥವಾ ಎರಡು ಬಾರಿ ಲಂಚ ನೀಡಿದ್ದಾರೆ. ಕೇವಲ 8 ಪ್ರತಿಶತದಷ್ಟು ಜನರು ಲಂಚ ನೀಡದೆ ಕೆಲಸವನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ. ಪಟ್ಟಿಯ ಪ್ರಕಾರ ಕೇರಳವು ಅತ್ಯಂತ ಕಡಿಮೆ ಭ್ರಷ್ಟ ರಾಜ್ಯಗಳಲ್ಲಿ ಒಂದಾಗಿದೆ. ಅಲ್ಲಿ ಕೇವಲ 10 ಪ್ರತಿಶತದಷ್ಟು ಜನರು ಮಾತ್ರ ತಮ್ಮ ಕೆಲಸವನ್ನು ಮಾಡಿಸಿಕೊಳ್ಳಲು ಲಂಚ ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಅವರೆಲ್ಲರೂ ಹಲವಾರು ಬಾರಿ (ನೇರವಾಗಿ ಅಥವಾ ಪರೋಕ್ಷವಾಗಿ) ಲಂಚ ನೀಡಿದ್ದಾರೆ. 50 ರಷ್ಟು ಜನರು ಲಂಚ ನೀಡದೆ ಕೆಲಸ ಮಾಡಿಸಿಕೊಂಡಿದ್ದಾರೆ. 40 ಪ್ರತಿಶತದಷ್ಟು ಜನರು ಲಂಚ ಪಾವತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಕೇರಳ, ಗುಜರಾತ್, ಗೋವಾ, ಪಶ್ಚಿಮ ಬಂಗಾಳ, ಒಡಿಶಾ, ಹರಿಯಾಣ ಮತ್ತು ದೆಹಲಿ ಅತ್ಯಂತ ಕಡಿಮೆ ಭ್ರಷ್ಟ ರಾಜ್ಯಗಳಾಗಿವೆ.
ಮದ್ಯಪಾನ, ಮಹಿಳೆ ಮತ್ತು ಭ್ರಷ್ಟಾಚಾರಕ್ಕೆ ಹತ್ತಿರದ ಸಂಬಂಧವಿದೆ. ಅದನ್ನು ನಾವು ಈಗಲೂ ನೋಡುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಬೆಳಕಿಗೆ ಬಂದ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಮಹಿಳೆಯರ ಪಾತ್ರದ ಬಗ್ಗೆ ವರದಿಯಾಗಿದೆ. ಮಹಿಳೆಯರು ಭ್ರಷ್ಟಾಚಾರದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವುದು ಕಂಡು ಬರುತ್ತದೆ.
ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ಇರುವ ಸರ್ಕಾರಗಳು, ಸರ್ಕಾರೇತರ ಸಂಘಟನೆಗಳು, ಮಾಧ್ಯಮಗಳು ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಈ ದಿನ ಆಚರಿಸುತ್ತವೆ. ಯುವ ಜನಾಂಗದವರು ಈ ಭ್ರಷ್ಟಾಚಾರವನ್ನು ವಿರೋಧಿಸಬೇಕೆಂಬ ಉದ್ದೇಶದಿಂದ ಟ್ವಿಟರ್, ಫೇಸ್‌ಬುಕ್‌ನಂತಹ ಸಾಮಾಜಿಕ ನೆಟ್‌ವರ್ಕ್‌ಗಳ ಮೂಲಕ ಪರಿಣಾಮಕಾರಿ ಸಂದೇಶಗಳನ್ನು ಹರಡಿ ಜಾಗೃತಿ ಮೂಡಿಸಲಾಗುತ್ತದೆ.