ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 ರ ಫೆಬ್ರವರಿ 1 ರಂದು ಐದನೇ ಬಾರಿಗೆ ಲೋಕಸಭೆಯಲ್ಲಿ ಭಾರತದ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇಡೀ ವರ್ಷದ ದೇಶದ ವಿವಿಧ ಇಲಾಖೆಗಳ ವೆಚ್ಚಕ್ಕಾಗಿ ಈ ಬಜೆಟ್ ಅನ್ನು ಸಿದ್ಧಪಡಿಸಲಾಗಿದೆ. ದೇಶದಾದ್ಯಂತ ಜನರು ಈ ಬಜೆಟ್‌ಗಾಗಿ ಕಾಯುತ್ತಿದ್ದಾರೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯುವುದರೊಂದಿಗೆ, ಕೇಂದ್ರ ಬಜೆಟ್ ಪ್ರಪಂಚದಾದ್ಯಂತದ ಆರ್ಥಿಕ ನೀತಿ ವೀಕ್ಷಕರಲ್ಲಿ ಪ್ರಮುಖವಾಗಿ ಹೊರಹೊಮ್ಮಿದೆ. ಈ ಸಂದರ್ಭದಲ್ಲಿ ಬಜೆಟ್‌ಗೆ ಸಂಬಂಧಿಸಿದ ಸಂಪ್ರದಾಯಗಳು, ಆಚರಣೆಗಳು, ಕೆಲವು ಪ್ರಮುಖ ಬದಲಾವಣೆಗಳು ಮತ್ತು ಮೈಲಿಗಲ್ಲುಗಳ ಬಗ್ಗೆ ನೋಡೋಣ ಬನ್ನಿ.
1. ಭಾರತದ ಮೊದಲ ಬಜೆಟ್: ಭಾರತದ ಮೊದಲ ಬಜೆಟ್ ಅನ್ನು ಏಪ್ರಿಲ್ 7, 1860 ರಂದು ಮಂಡಿಸಲಾಯಿತು. ಆಗ ಭಾರತ ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತವಾಗಿರಲಿಲ್ಲ. ಆದರೆ ಸ್ವತಂತ್ರ ಭಾರತದ ಮೊದಲ ಬಜೆಟ್ ಬಗ್ಗೆ ಮಾತನಾಡುವುದಾದರೆ, ಅದನ್ನು 26 ನವೆಂಬರ್ 1947 ರಂದು ಮಂಡಿಸಲಾಯಿತು. ಆಗ ಹಣಕಾಸು ಸಚಿವರಾಗಿದ್ದವರು ಆರ್ ಕೆ ಷಣ್ಮುಖಂ ಚೆಟ್ಟಿ. ಆ ಬಜೆಟ್‌ನಲ್ಲಿ ಭಾರತದ ಆರ್ಥಿಕತೆಯ ಮೂಲ ಅವಲೋಕನವಿತ್ತು ಮತ್ತು ಅದರಲ್ಲಿ ಯಾವುದೇ ಬದಲಾವಣೆ ಅಥವಾ ಪ್ರಸ್ತಾಪವನ್ನು ಮಾಡಲಾಗಿರಲಿಲ್ಲ.
2.ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಸಚಿವರು: ಹಣಕಾಸು ಸಚಿವರಾಗಿ ಅನೇಕ ಬಾರಿ ಬಜೆಟ್ ಮಂಡಿಸುವ ಅವಕಾಶ ಯಾರಿಗೆ ಸಿಕ್ಕಿದೆ ಗೊತ್ತಾ? ಮಾಜಿ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಇಟ್ಟುಕೊಂಡಿದ್ದಾರೆ. ಅವರು ಗರಿಷ್ಠ 10 ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಇದಾದ ನಂತರ ಮಾಜಿ ವಿತ್ತ ಸಚಿವ ಪಿ.ಚಿದಂಬರಂ 9 ಬಾರಿ, ಮಾಜಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಮತ್ತು ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ತಲಾ ಎಂಟು ಬಾರಿ ಸಾಮಾನ್ಯ ಬಜೆಟ್ ಮಂಡಿಸಿದ್ದಾರೆ. ಮತ್ತೊಂದೆಡೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ ಒಟ್ಟು 6 ಬಾರಿ ಬಜೆಟ್ ಮಂಡಿಸುವ ಅವಕಾಶ ಪಡೆದರು. ಪ್ರಸ್ತುತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಐದನೇ ಬಜೆಟ್ ಮಂಡಿಸಲಿದ್ದಾರೆ.
3. ಕೇಂದ್ರ ಬಜೆಟ್ ಯಾರ ಕಲ್ಪನೆ?: ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಾಗುತ್ತದೆ. ಈ ವಿಚಾರ ನಮ್ಮೆಲ್ಲರಿಗೂ ತಿಳಿದಿರುವಂಥದ್ದೇ ಆಗಿದೆ. ಆದರೆ ಯಾವ ವ್ಯಕ್ತಿಯು ಬಜೆಟ್ ಎಂಬ ಪರಿಕಲ್ಪನೆಯನ್ನು ಜಾರಿಗೆ ತಂದರು ಎಂಬುದೇನಾದರೂ ಗೊತ್ತೇ? ಬಹುಶಃ ಅನೇಕರಿಗೆ ಇದು ತಿಳಿದಿರಲಿಕ್ಕಿಲ್ಲ. ಪ್ರೊಫೆಸರ್ ಪ್ರಶಾಂತ್ ಚಂದ್ರ ಮಹಲನೋಬಿಸ್ ಅವರು ಕೇಂದ್ರ ಬಜೆಟ್ ಪರಿಕಲ್ಪನೆಯನ್ನು ವಿನ್ಯಾಸಗೊಳಿಸಿದ ವ್ಯಕ್ತಿ. ಅವರು ಭಾರತೀಯ ವಿಜ್ಞಾನಿ ಮತ್ತು ಸಂಖ್ಯಾಶಾಸ್ತ್ರಜ್ಞರಾಗಿದ್ದರು. ಭಾರತದ ಯೋಜನಾ ಆಯೋಗದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದರು. ಭಾರತದಲ್ಲಿ ಆಧುನಿಕ ಅಂಕಿ - ಅಂಶಗಳ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಪಿಸಿ ಮಹಲನೋಬಿಸ್ ಅವರು ಸ್ವತಂತ್ರ ಭಾರತದ ಬಜೆಟ್ ಅನ್ನು ವಿನ್ಯಾಸಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
4. ಕೇಂದ್ರ ಬಜೆಟ್ ಮಂಡಿಸಿದ ಮೊದಲ ಪ್ರಧಾನಿ: ಕೇಂದ್ರ ಬಜೆಟ್ ಅನ್ನು ಸಾಮಾನ್ಯವಾಗಿ ಹಣಕಾಸು ಸಚಿವರು ಮಂಡಿಸುತ್ತಾರೆ. ಆದರೆ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು 1958-1959 ರ ಹಣಕಾಸು ವರ್ಷಕ್ಕೆ ಕೇಂದ್ರ ಬಜೆಟ್ ಅನ್ನು ಮಂಡಿಸಿದ ಮೊದಲ ಪ್ರಧಾನಿಯಾಗಿದ್ದಾರೆ. ಜವಾಹರಲಾಲ್ ನೆಹರೂ ಅವರನ್ನು ಹೊರತುಪಡಿಸಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ಬಜೆಟ್ ಮಂಡಿಸಿದ ಏಕೈಕ ಪ್ರಧಾನಿಗಳು.
5. ಕೇಂದ್ರ ಬಜೆಟ್ ಮಂಡಿಸದ ಸಚಿವರು: ಕೆ.ಸಿ. ನಿಯೋಗಿ ಮತ್ತು ಎಚ್.ಎನ್. ಬಹುಗುಣ ಮಾತ್ರ ಕೇಂದ್ರ ಬಜೆಟ್ ಮಂಡಿಸದ ಭಾರತದ ಇಬ್ಬರು ಹಣಕಾಸು ಸಚಿವರಾಗಿದ್ದಾರೆ. ಏಕೆಂದರೆ ಎರಡು ಬಜೆಟ್ ದಿನಗಳ ನಡುವೆ ಕಡಿಮೆ ಅವಧಿಗೆ ಅವರು ಅಧಿಕಾರ ಹಿಡಿದಿದ್ದು, ಬಜೆಟ್ ಮಂಡಿಸಲು ಅವಕಾಶವೇ ಸಿಗಲಿಲ್ಲ. ನಿಯೋಗಿ ಅವರು ಭಾರತದ ಎರಡನೇ ಹಣಕಾಸು ಸಚಿವರಾಗಿದ್ದರು. ಅವರು ಕೇವಲ 35 ದಿನಗಳು ಮಾತ್ರ ಕಚೇರಿಯಲ್ಲಿದ್ದರು.