ಮುಂಬೈ (ಮಹಾರಾಷ್ಟ್ರ):20 ವರ್ಷಗಳ ಹಿಂದೆ ಮುಂಬೈನಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳ ಸಹಾಯದಿಂದ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದಾರೆ. ಹಮೀದಾ ಭಾನು(70) ಮುಂಬೈನಿಂದ ದುಬೈಗೆ ಉದ್ಯೋಗಕ್ಕಾಗಿ ತೆರಳಿದ್ದರು. ಆದರೆ, ಟ್ರಾವೆಲ್ ಏಜೆಂಟ್ ಮೋಸದಿಂದಾಗಿ ಇವರು ದುಬೈ ಬದಲು ಪಾಕಿಸ್ತಾನದಲ್ಲಿ ಇಳಿಯುವಂತಾಯಿತು. ಬರೋಬ್ಬರಿ 20 ವರ್ಷಗಳ ನಂತರ ಸಾಮಾಜಿಕ ಮಾಧ್ಯಮದ ಸಹಾಯದಿಂದ ಹಮೀದಾ ಭಾನು ತನ್ನ ಕುಟುಂಬವನ್ನು ಸಂಪರ್ಕಿಸಿದ್ದಾರೆ.
ಇವರ ಕತೆಯನ್ನು ಸಾಮಾಜಿಕ ಕಾರ್ಯಕರ್ತ ಮರೂಫ್ ಎಂಬುವವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಮುಂಬೈನ ಸಾಮಾಜಿಕ ಹೋರಾಟಗಾರರೊಬ್ಬರನ್ನು ಸಂಪರ್ಕಿಸಿದ್ದಾರೆ. ನಂತರ ಇಲ್ಲಿನ ಸಾಮಾಜಿಕ ಹೋರಾಟಗಾರ ಖಫ್ಲಾನ್ ಶೇಕ್ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹಮೀದಾ ಭಾನು ಅವರ ಕುಟುಂಬವನ್ನು ಪತ್ತೆ ಮಾಡಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಕೊನೆಗೂ ಇವರ ಶ್ರಮ ಯಶಸ್ವಿಯಾಗಿದ್ದು, ಕರ್ಲಾದ ಕಷಿಯಾವಾಡ ಪ್ರದೇಶದಲ್ಲಿರುವ ಹಮೀದಾ ಅವರ ಪುತ್ರಿ ಯಾಸ್ಮಿನ್ ಶೇಕ್ ಅವರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಹಮೀದಾ ಪುತ್ರಿ ಯಾಸ್ಮಿನ್, ನಮ್ಮ ಅಮ್ಮ ಸುರಕ್ಷಿತ ಹಾಗೂ ಜೀವಂತವಾಗಿರುವುದಕ್ಕೆ ನಾವು ತುಂಬಾ ಖುಷಿಯಾಗಿದ್ದೇವೆ. ಆಕೆಯನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಲು ಭಾರತ ಸರ್ಕಾರದ ಸಹಾಯ ಬೇಕಿದೆ ಎಂದಿದ್ದಾರೆ.