ಅಮರಾವತಿ(ಮಹಾರಾಷ್ಟ್ರ): ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದಕ್ಕಾಗಿ ಕಳೆದ ಕೆಲ ದಿನಗಳ ಹಿಂದೆ ಹೈದರಾಬಾದ್ನಲ್ಲಿ ನಡುರಸ್ತೆಯಲ್ಲೇ ಯುವಕನೋರ್ವನ ಕೊಲೆ ಮಾಡಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರದ ಅಮರಾವತಿಯಲ್ಲಿ ಪತಿ ಜೊತೆ ವಾಸವಿದ್ದ ಯುವತಿಯನ್ನ ಕುಟುಂಬಸ್ಥರು ಎಳೆದೊಯ್ದ ಘಟನೆ ನಡೆದಿದೆ.
ತಾನು ಪ್ರೀತಿ ಮಾಡ್ತಿದ್ದ ಯುವಕನೊಂದಿಗೆ ಅಂತರ್ಜಾತಿ ವಿವಾಹ ಮಾಡಿಕೊಂಡು, ಆತನೊಂದಿಗೆ ಸಂಸಾರ ನಡೆಸುತ್ತಿದ್ದ ಯುವತಿಯೊಬ್ಬಳನ್ನು ಆಕೆಯ ಕುಟುಂಬಸ್ಥರು ಎಳೆದೊಯ್ದಿದ್ದಾರೆ. ಅಮರಾವತಿ ಜಿಲ್ಲೆಯ ಮೋಶಿ ತಾಲೂಕಿನ ಅಂಬಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪತಿ ಜೊತೆ ವಾಸವಿದ್ದ ಯುವತಿಯನ್ನ ಎಳೆದೊಯ್ದ ಕುಟುಂಬಸ್ಥರು! ಮೇ. 4ರಂದು ಈ ಘಟನೆ ನಡೆದಿದ್ದು, ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವ ಜೋಡಿಯೊಂದು ಏಪ್ರಿಲ್ 28ರಂದು ಆರ್ಯ ಸಮಾಜ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಈ ಮದುವೆಗೆ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದಕ್ಕಾಗಿ ಕೋಪಗೊಂಡ ಬಾಲಕಿ ಸಂಬಂಧಿಕರು ಇಂದು ನೇರವಾಗಿ ಯುವಕನ ಮನೆಗೆ ಹೋಗಿ, ಆಕೆಯನ್ನ ಎಳೆದೊಯ್ದಿದ್ದಾರೆ. ಈ ವೇಳೆ, ಹುಡುಗನ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಿಂದ ಎರಡು ಕುಟುಂಬಗಳ ಮಧ್ಯೆ ಜಗಳ ಸಹ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆದರೆ, ಇಲ್ಲಿಯವರೆಗೆ ವಿಚಾರಣೆ ಮಾತ್ರ ನಡೆದಿಲ್ಲ ಎನ್ನಲಾಗ್ತಿದೆ.