ನವದೆಹಲಿ: ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಉಗ್ರರು ದಾಳಿಗೆ ದೊಡ್ಡ ಸಂಚು ರೂಪಿಸಬಹುದು ಎಂದು ಗುಪ್ತಚರ ಸಂಸ್ಥೆಗಳು ಗುರುವಾರ ಎಚ್ಚರಿಕೆ ನೀಡಿವೆ. ಆದ್ದರಿಂದ ಪಂಜಾಬ್ನಲ್ಲಿ ಪೊಲೀಸರು ಹೈಅಲರ್ಟ್ ಘೋಷಿಸಿದ್ದಾರೆ.
ಕೇಂದ್ರ ಗುಪ್ತಚರ ಸಂಸ್ಥೆಗಳಿಂದ ಬಂದ ಮಾಹಿತಿಯ ಪ್ರಕಾರ, ಪಂಜಾಬ್ನಲ್ಲಿ ಪೊಲೀಸ್ ಠಾಣೆಗಳು ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ಭಯೋತ್ಪಾದಕ ದಾಳಿಯ ಎಚ್ಚರಿಕೆ ನೀಡಲಾಗಿದೆ. ಪಂಜಾಬ್ ಪೊಲೀಸರು ಗಡಿಯಾಚೆಗಿನ ಡ್ರಗ್ಸ್ ಕಳ್ಳಸಾಗಣೆದಾರರ ಜಾಲವನ್ನು ಭೇದಿಸಿದ ಒಂದೇ ವಾರದೊಳಗೆ ಈ ಎಚ್ಚರಿಕೆ ಕೊಡಲಾಗಿದೆ.
ತೀರಾ ಇತ್ತೀಚೆಗೆ ನಡೆದ ಸರ್ಹಾಲಿ ಪೊಲೀಸ್ ಠಾಣೆಯ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ (ಆರ್‌ಪಿಜಿ) ದಾಳಿ ನಡೆಸಲಾಗಿತ್ತು. ಇದೇ ಮಂಗಳವಾರವಷ್ಟೇ ಈ ಪ್ರಕರಣವನ್ನೂ ಪೊಲೀಸರು ಭೇದಿಸಿದ್ದಾರೆ. ಕೆನಡಾ ಮೂಲದ ಗ್ಯಾಂಗ್ಸ್ಟರ್, ಭಯೋತ್ಪಾದಕ ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾ ಸೂಚನೆಯ ಮೇರೆಗೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ ಮಾಡಲಾಗಿತ್ತು. ಇದನ್ನು ಫಿಲಿಪೈನ್ಸ್‌ನಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.