ಕರ್ನಾಟಕ

karnataka

ETV Bharat / bharat

ಕೊರೊನಾ 3ನೇ ಅಲೆ: ಸರ್ಕಾರವನ್ನು ಎಚ್ಚರಿಸುವಂತೆ ಪ್ರತಿಪಕ್ಷಗಳಿಗೆ ಬುದ್ಧಿಜೀವಿಗಳ ಪತ್ರ

ವಿರೋಧ ಪಕ್ಷಗಳು ತಮ್ಮ ಪ್ರಭಾವವನ್ನು ಬಳಸಿಕೊಂಡು ಸನಿಹದಲ್ಲಿರುವ ಕೋವಿಡ್​ ಮೂರನೇ ಅಲೆಗೆ ಮುಂಚಿತವಾಗಿ ಅಗತ್ಯವಿರುವ ಸಿದ್ಧತೆ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಬೇಕೆಂದು ಸೂಚಿಸಿ ಬುದ್ಧಿಜೀವಿಗಳು ಮುಕ್ತ ಪತ್ರವನ್ನು ಬರೆದಿದ್ದಾರೆ.

Covid third wave
ಕೊರೊನಾ 3ನೇ ಅಲೆ

By

Published : Jun 4, 2021, 9:40 AM IST

ನವದೆಹಲಿ: ಖ್ಯಾತ ಇತಿಹಾಸಕಾರ ರೋಮಿಲಾ ಥಾಪರ್ ಮತ್ತು ಇರ್ಫಾನ್ ಹಬೀಬ್, ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಸೇರಿದಂತೆ 185ಕ್ಕೂ ಹೆಚ್ಚು ಬುದ್ಧಿಜೀವಿಗಳು ಹಾಗೂ ಚಿಂತಕರು ವಿರೋಧ ಪಕ್ಷಗಳಿಗೆ ಮುಕ್ತ ಪತ್ರವೊಂದನ್ನು ಬರೆದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಭವನೀಯ ಕೊರೊನಾ ಮೂರನೇ ಅಲೆಗೆ ಸಿದ್ಧವಾಗುವುದನ್ನು ಖಚಿತಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ವಿರೋಧ ಪಕ್ಷಗಳು ತಮ್ಮ ಪ್ರಭಾವವನ್ನು ಬಳಸಿಕೊಂಡು ಸನಿಹದಲ್ಲಿರುವ ಮೂರನೇ ಅಲೆಗೆ ಮುಂಚಿತವಾಗಿ ಅಗತ್ಯವಿರುವ ಸಿದ್ಧತೆ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಬೇಕು. ಉದಾಹರಣೆಗೆ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು ಎಂದು ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದು, ಮಕ್ಕಳಿಗೆ ಬೇಕಾಗುವ ಆಕ್ಸಿಜನ್​ ಮಾಸ್ಕ್​ಗಳು, ಬೆಡ್​ಗಳ ವ್ಯವಸ್ಥೆ ಮಾಡಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ವಿಶ್ವದ ಆತ್ಮಸಾಕ್ಷಿಯನ್ನೇ ಪ್ರಶ್ನಿಸಿದ ಭಾರತದ 2ನೇ ಅಲೆ

ಎರಡನೇ ಕೋವಿಡ್​ ಅಲೆ ಸಂದರ್ಭದಲ್ಲಿ ಸೋಂಕಿನಿಂದ ಮೃತಪಟ್ಟವರ ಮೃತದೇಹಗಳು ರಸ್ತೆಗಳ ಮೇಲೆ ಬಿದ್ದಿರುವುದು, ನದಿಗಳಲ್ಲಿ ತೇಲುತ್ತಿರುವ ದೃಶ್ಯಗಳು ಇಡೀ ವಿಶ್ವದ ಆತ್ಮಸಾಕ್ಷಿಯನ್ನೇ ಪ್ರಶ್ನಿಸಿವೆ. ಆಸ್ಪತ್ರೆಯಲ್ಲಿ ಹಾಸಿಗೆಗಳು, ವೆಂಟಿಲೇಟರ್‌ಗಳು, ಆಮ್ಲಜನಕ, ಅಗತ್ಯ ಔಷಧಿಗಳು, ಆಂಬುಲೆನ್ಸ್‌ಗಳು ಮುಂತಾದ ಮೂಲಭೂತ ಆರೋಗ್ಯ ಸೇವೆಗಳನ್ನು ಪಡೆಯಲು ಲಕ್ಷಾಂತರ ಭಾರತೀಯರು ಪರದಾಡುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕಳೆದ 70 ವರ್ಷಗಳಲ್ಲೇ ಯಶಸ್ವಿ ಸಾಮೂಹಿಕ ವ್ಯಾಕ್ಸಿನೇಷನ್ ಅಭಿಯಾನ ನಡೆಸಲಾಗಿದ್ದರೂ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ದರದಲ್ಲಿ ಲಸಿಕೆಗಳನ್ನು ನೀಡಲಾಗುತ್ತಿದೆ. ದೊಡ್ಡ ದೊಡ್ಡ ರ‍್ಯಾಲಿ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಕೇಂದ್ರ ಸರ್ಕಾರ ಆಕ್ಸಿಜನ್​, ವ್ಯಾಕ್ಸಿನ್​, ಬೆಡ್​ಗಳ ಲಭ್ಯತೆಯನ್ನು ಹೆಚ್ಚಿಸಲು ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ. ಅದೇ ರೀತಿ, ತಜ್ಞರ ಸಲಹೆಯನ್ನು ಪದೇ ಪದೇ ನಿರ್ಲಕ್ಷಿಸಲಾಗುತ್ತದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: ಬ್ರಿಟನ್​ನಲ್ಲಿ ಆರಂಭವಾಗುತ್ತಿದೆ ಕೋವಿಡ್​ 3ನೇ ಅಲೆ.. ಭಾರತಕ್ಕಿದು ಎಚ್ಚರಿಕೆಯ ಘಂಟೆ

ಪಕ್ಷ- ಸರ್ಕಾರ-ನಾಗರಿಕ ಸಮಾಜ ಒಗ್ಗೂಡಿ ಹೋರಾಡಿ

ಸಾಂಕ್ರಾಮಿಕದ ವೇಳೆ ಜನರ ಹಿತಾಸಕ್ತಿಗಾಗಿ ಹೆಚ್ಚಿನ ರಾಜಕೀಯ ಪಕ್ಷಗಳು ಪಕ್ಷಪಾತವಿಲ್ಲದೆ ಕೆಲಸ ಮಾಡಲು ಸಿದ್ಧರಿರುವುದು ಒಳ್ಳೆಯ ವಿಚಾರವಾಗಿದೆ. ಆದರೆ ಇಂತಹ ಪ್ರಸ್ತಾಪವನ್ನು ಭಾರತ ಸರ್ಕಾರ ಸ್ವಾಗತಿಸಲೂ ಇಲ್ಲ ಹಾಗೂ ದೇಶದ ಅಭೂತಪೂರ್ವ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಪಕ್ಷಗಳು, ರಾಜ್ಯ ಸರ್ಕಾರಗಳು, ತಜ್ಞರು ಮತ್ತು ನಾಗರಿಕ ಸಮಾಜವನ್ನು ಒಳಗೊಂಡ ಸಕ್ರಿಯ ರಾಷ್ಟ್ರೀಯ ಕಾರ್ಯಪಡೆಯನ್ನೂ ರಚಿಸಿಲ್ಲ. ಹೀಗಾಗಿ ಆ ಪಕ್ಷ, ಈ ಪಕ್ಷ ಎನ್ನದೇ ಎಲ್ಲಾ ಪಕ್ಷಗಳು, ಸರ್ಕಾರಗಳು ನಾಗರಿಕ ಸಮಾಜದೊಂದಿಗೆ ಸೇರಿಕೊಂಡು ವೈರಸ್​ ವಿರುದ್ಧ ಹೋರಾಡಲು ಚಿಂತಕರು ಮನವಿ ಮಾಡಿದ್ದಾರೆ.

ಪತ್ರಕ್ಕೆ ಸಹಿ ಹಾಕಿದವರಲ್ಲಿ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಮತ್ತು ಹೋರಾಟಗಾರ ವಿಲ್ಸನ್ ಬೆಜ್ವಾಡಾ, ಮಾಜಿ ಆಮ್ನೆಸ್ಟಿ ಇಂಟರ್ನ್ಯಾಷನಲ್ ಸೆಕ್ರೆಟರಿ ಜನರಲ್ ಸಲೀಲ್ ಶೆಟ್ಟಿ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮಾಜಿ ಅಧ್ಯಕ್ಷ ಸುಖದೇವೊ ಥೋರತ್, ಯುಪಿಎಸ್​ಸಿ ಮಾಜಿ ಸದಸ್ಯ ಪುರುಷೋತ್ತಮ್‌ ಅಗರ್ವಾಲ್ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯ, ಜವಾಹರಲಾಲ್ ನೆಹರು ವಿವಿ (ಜೆಎನ್‌ಯು), ಇಟಲಿಯ ಸಿಯೆನಾ ವಿವಿ, ಪೆನ್ಸಿಲ್ವೇನಿಯಾ ವಿವಿ ಸೇರಿದಂತೆ ಅನೇಕ ಯೂನಿವರ್ಸಿಟಿಗಳ ಶಿಕ್ಷಣ ತಜ್ಞರ ಸಹಿಯನ್ನು ಈ ಪತ್ರ ಒಳಗೊಂಡಿದೆ.

ABOUT THE AUTHOR

...view details