ನವದೆಹಲಿ: ರಾಜ್ಯ ಸರ್ಕಾರಗಳನ್ನು ನಿಂದಿಸುವ, ಜಗಳವಾಡುವ ಬದಲು ಅವುಗಳೊಂದಿಗೆ ಸೇರಿ ಕೆಲಸ ಮಾಡಿದರೆ ಒಳಿತು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆಗೆ ಕೇಜ್ರಿವಾಲ್ ಹೀಗೆ ತರಾಟೆ ತೆಗೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಮನೆ ಬಾಗಿಲಿಗೆ ಪಡಿತರ ನೀಡುವ ಯೋಜನೆ ಜಾರಿಗೆ ತರಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಬಿಟ್ಟಿಲ್ಲ. ಪಿಜ್ಜಾ, ಬರ್ಗರ್ಗಳ ಹೋಂ ಡೆಲಿವರಿಗೆ ಅವಕಾಶ ನೀಡ್ತಾರೆ. ಆದ್ರೆ ರೇಷನ್ ಡೆಲಿವರಿಗೆ ಅನುಮತಿ ನೀಡ್ತಿಲ್ಲ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರವಿಶಂಕರ್ ಪ್ರಸಾದ್, ದೆಹಲಿ, ಅಸ್ಸೋಂ ಮತ್ತು ಪಶ್ಚಿಮ ಬಂಗಾಳ - ಈ ಮೂರು ರಾಜ್ಯಗಳು ಮಾತ್ರ 'ಒಂದು ದೇಶ, ಒಂದೇ ಪಡಿತರ ಚೀಟಿ' ಯೋಜನೆ ಜಾರಿಗೊಳಿಸಿಲ್ಲ. ಜನರಿಗೆ ಆಮ್ಲಜನಕವನ್ನು ಪೂರೈಸುವಲ್ಲಿ ವಿಫಲವಾಗಿರುವ ಕೇಜ್ರಿವಾಲ್ ಸರ್ಕಾರ, ಮನೆ ಬಾಗಿಲಿಗೆ ಪಡಿತರ ನೀಡುವ ಕುರಿತು ಮಾತನಾಡುತ್ತಿದೆ. ದೆಹಲಿ ಸರ್ಕಾರ ರೇಷನ್ ಮಾಫಿಯಾ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಈಗ ಕೇಜ್ರಿವಾಲ್ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.
"ಇಂದು ಜನರು ಕೇಂದ್ರದಲ್ಲಿ ದಿನವಿಡೀ ರಾಜ್ಯ ಸರ್ಕಾರಗಳನ್ನು ನಿಂದಿಸುವ, ಜಗಳವಾಡುವ ಸರ್ಕಾರವನ್ನು ನೋಡಲು ಬಯಸುತ್ತಾರೆ. ಹೀಗೆ ನಿಂದಿಸುವ ಬದಲು ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿಸಲಿ. 130 ಕೋಟಿ ಜನರು, ಕೇಂದ್ರ-ರಾಜ್ಯ ಸರ್ಕಾರಗಳು ಒಗ್ಗೂಡಿ 'ಟೀಂ ಇಂಡಿಯಾ'ದಂತೆ ಕೆಲಸ ಮಾಡಿದಾಗ ದೇಶ ಪ್ರಗತಿಯಾಗುತ್ತದೆ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.