ಹೈದರಾಬಾದ್:ಆನ್ಲೈನ್ನಲ್ಲಿ ನಮಗೆ ಬೇಕಾದ ಅಗತ್ಯವಸ್ತುಗಳ ಆರ್ಡರ್ ಮಾಡಿ, ಮೋಸ ಹೋಗಿರುವ ಅನೇಕ ಘಟನೆಗಳು ನಮ್ಮ ಮುಂದೆ ಈಗಾಗಲೇ ನಡೆದು ಹೋಗಿವೆ. ಸದ್ಯ ಅಂತಹ ಮತ್ತೊಂದು ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.
ಕಳೆದ ಕೆಲ ದಿನಗಳಿಂದ 'Big Billion Days' ಸೇಲ್ ನಡೆಯುತ್ತಿದ್ದು, ಅಗತ್ಯ ವಸ್ತುಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವ ಕಾರಣ ಅನೇಕರು ತಮ್ಮಿಷ್ಟದ ವಸ್ತು ಆರ್ಡರ್ ಮಾಡಿ ಖರೀದಿ ಮಾಡುತ್ತಿದ್ದಾರೆ. ಈ ವೇಳೆ, ವ್ಯಕ್ತಿಯೊಬ್ಬ ಮೋಸ ಹೋಗಿರುವ ಪ್ರಕರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಐಪೋನ್ ಬದಲಿಗೆ ಬಂತು ನಿರ್ಮಾ ಸೋಪ್
ಪ್ರತಿಷ್ಠಿತ ಆನ್ಲೈನ್ ಮಾರಾಟ ಸಂಸ್ಥೆಯೊಂದರಿಂದ ವ್ಯಕ್ತಿಯೋರ್ವ ಸುಮಾರು 53,000 ಸಾವಿರ ರೂ. ಮೌಲ್ಯದ ಆ್ಯಪಲ್ ಐಫೋನ್ 12 ಆರ್ಡರ್ ಮಾಡಿದ್ದಾನೆ. ಆತನ ಮನೆಗೆ ಆರ್ಡರ್ ಬರುತ್ತಿದ್ದಂತೆ ಓಪನ್ ಮಾಡಿ ನೋಡಿದ್ದಾನೆ.
ಈ ವೇಳೆ, ಮೊಬೈಲ್ ಬದಲಿಗೆ ಎರಡು ನಿರ್ಮಾ ಸೋಪ್ ಸಿಕ್ಕಿವೆ. ಇದರಿಂದ ತಬ್ಬಿಬ್ಬುಗೊಂಡಿರುವ ವ್ಯಕ್ತಿ ದೂರು ದಾಖಲು ಮಾಡಿದ್ದಾನೆ. ಸಂಪೂರ್ಣ ಮಾಹಿತಿ ಪಡೆದುಕೊಂಡ ಬಳಿಕ ಫ್ಲಿಪ್ಕಾರ್ಟ್ ತನ್ನ ಕಡೆಯಿಂದ ಆಗಿರುವ ತಪ್ಪು ಒಪ್ಪಿಕೊಂಡಿದೆ. ಜೊತೆಗೆ ಗ್ರಾಹಕನಿಗೆ ಹಣ ಮರುಪಾವತಿ ಮಾಡಿದೆ.
ಇದನ್ನೂ ಓದಿರಿ:ಮೊಬೈಲ್ ಬಾಕ್ಸ್ನಲ್ಲಿ ಬಂತು ಆಲೂಗಡ್ಡೆ, ವಿಮ್ ಸೋಪ್... ಅಮೆಜಾನ್ ವಿರುದ್ಧ ದೂರು
ಮೋಸ ಹೋಗಿರುವ ವ್ಯಕ್ತಿ ಸಿಮ್ರನ್ ಪಾಲ್ ಸಿಂಗ್,ಈ ವಿಡಿಯೋ ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇ-ಕಾಮರ್ಸ್ ವೆಬ್ಸೈಟ್ನಲ್ಲಿ ಬಿಗ್ ಬಿಲಿಯನ್ ಡೇ ಸೇಲ್ ನಡೆಯುತ್ತಿದ್ದು, ಲಕ್ಷಾಂತರ ಗ್ರಾಹಕರು ಅಗತ್ಯ ವಸ್ತು ಆರ್ಡರ್ ಮಾಡ್ತಿದ್ದಾರೆ. ಈ ಹಿಂದೆ ಕೂಡ ಆನ್ಲೈನ್ ಮೂಲಕ ಆರ್ಡರ್ ಮಾಡಿ, ಮೋಸ ಹೋಗಿರುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇವೆ.