ಹೈದರಾಬಾದ್:ಭಾರತೀಯ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ 'ಕೆಜಿಎಫ್ ಚಾಪ್ಟರ್ 2' ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಚಿತ್ರದಲ್ಲಿ ಎದುರಾಳಿಗಳನ್ನ ಸದೆಬಡಿಯಲು ನಾಯಕ ಸುತ್ತಿಗೆ ಬಳಸಿರುವುದು ಗೊತ್ತೇ ಇದೆ. ಅದೇ ರೀತಿ ತೆಲಂಗಾಣದಲ್ಲಿ ಸರಣಿ ಕೊಲೆಗೆ ಆರೋಪಿಗಳು ಸುತ್ತಿಗೆ ಬಳಕೆ ಮಾಡಿಕೊಂಡಿದ್ದರು ಎಂದು ಕಳೆದ ಕೆಲ ದಿನಗಳ ಹಿಂದೆ ಪೊಲೀಸರು ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಚಿತ್ರದಲ್ಲಿ ನಾಯಕ ನಟ ರಾಕಿ ಭಾಯ್ ಸಿಗರೇಟ್ ಸೇದುವುದರಿಂದ ಪ್ರಭಾವಕ್ಕೊಳಗಾದ ಚಿಕ್ಕ ಬಾಲಕನೊಬ್ಬ ಒಂದೇ ದಿನ ಪ್ಯಾಕ್ ಸಿಗರೇಟ್ ಸೇರಿ ಅಸ್ವಸ್ಥಗೊಂಡಿದ್ದು, ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಕೇವಲ ಎರಡು ದಿನದ ಅಂತರದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಎರಡ್ಮೂರು ಸಲ ನೋಡಿರುವ 15 ವರ್ಷದ ಹೈದರಾಬಾದ್ ಬಾಲಕನೊಬ್ಬ, ಚಿತ್ರದಲ್ಲಿನ ನಾಯಕ ನಟ ರಾಕಿ ಭಾಯ್ನಿಂದ ಪ್ರಭಾವಿತನಾಗಿ ಪ್ಯಾಕ್ ಸಿಗರೇಟು ಸೇದಿ ಅಸ್ವಸ್ಥಗೊಂಡಿದ್ದಾನೆ. ಇದೀಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಒಂದೇ ದಿನ ಪ್ಯಾಕ್ ಸಿಗರೇಟ್ ಸೇರಿರುವ ಕಾರಣ, ಆತನಲ್ಲಿ ಗಂಟಲು ನೋವು, ಕೆಮ್ಮು ಕಾಣಿಸಿಕೊಂಡಿದೆ. ಹೀಗಾಗಿ ನಗರದ ಸೆಂಚುರಿ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆ ಶ್ವಾಸಕೋಶಶಾಸ್ತ್ರಜ್ಞ ಡಾ. ರೋಹಿತ್ ರೆಡ್ಡಿ ಮಾತನಾಡಿ, ಹದಿಹರೆಯದವರು ರಾಕಿ ಭಾಯ್ ಪಾತ್ರಗಳಿಂದ ಪ್ರಭಾವಿತರಾಗುವುದು ಸುಲಭ. ಬಾಲಕ ಸಹ ಸಿಗರೇಟ್ ಸೇದಿರುವ ಕಾರಣ ತೀವ್ರ ಅಸ್ವಸ್ಥನಾಗಿದ್ದಾನೆ. ಆತನಿಗೆ ಚಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದ್ದಾನೆಂದು ತಿಳಿಸಿದ್ದಾರೆ.
ಇದನ್ನೂ ಓದಿ:ತೆಲಂಗಾಣದಲ್ಲಿ ಸರಣಿ ಕೊಲೆ : KGF ಸಿನಿಮಾ ಆರೋಪಿಗಳಿಗೆ ಪ್ರೇರಣೆಯಾಯಿತೇ ಎಂಬ ಶಂಕೆ!
ತೆರೆ ಕಾಣುವ ಸಿನಿಮಾಗಳು ಸಮಾಜದಲ್ಲಿ ಹೆಚ್ಚಿನ ಪ್ರಭಾವ ಬೀರುತ್ತವೆ. ಚಿತ್ರ ನಿರ್ಮಾಪಕರು, ನಟರು ಚಿತ್ರಗಳಲ್ಲಿ ಸಿಗರೇಟ್ ಸೇದುವುದು, ತಂಬಾಕು ಜಗಿಯುವುದು ಅಥವಾ ಅಲ್ಕೋಹಾಲ್ ಸೇವನೆಯಂತಹ ಕಾರ್ಯ ಮಾಡಬಾರದು ಎಂದು ಹೇಳಿದ್ದಾರೆ. ಇವುಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆ ಮಾಡಿದ್ದು, ಉಳಿದಂತೆ ಸಂಜಯ್ ದತ್, ರವೀನಾ ಟಂಡನ್ ಹಾಗೂ ಶ್ರೀನಿಧಿ ಶೆಟ್ಟಿ ಬಣ್ಣ ಹಂಚಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಈ ಸಿನಿಮಾ ಹೊಸದೊಂದು ದಾಖಲೆ ಬರೆದಿದೆ.